ಬೆಂಗಳೂರು: ‘ಕೆಂಗೇರಿಯಲ್ಲಿ ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಯಾವುದೇ ಊಹಾಪೋಹಗಳಿಗೆ ಆಸ್ಪದವಿಲ್ಲ. ಆರೋಪಿಯ ರಕ್ಷಣೆಯ ಪ್ರಶ್ನೆಯೇ ಇಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಹೇಳಿದರು.
ನ.2ರಂದು ಸಂಜೆ ಕೆಂಗೇರಿ ಬಸ್ ನಿಲ್ದಾಣದ ಬಳಿ ಬೆಂಜ್ ಕಾರಿನಿಂದ ಸಂಭವಿಸಿದ್ದ ಅಪಘಾತದಲ್ಲಿ ಪಾದಚಾರಿ ಸಂಧ್ಯಾ (30) ಅವರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಕಾರು ಚಾಲಕ ಧನುಷ್ ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
‘ಬೆಂಜ್ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು, ನಂತರ ದ್ವಿಚಕ್ರ ವಾಹನಕ್ಕೂ ಗುದ್ದಿತ್ತು. ಪ್ರಾಥಮಿಕ ತನಿಖೆ ವೇಳೆ ಆರೋಪಿಯು ಪಾನಮತ್ತನಾಗಿ ಅಪಘಾತ ಎಸಗಿರುವುದು ಗೊತ್ತಾಗಿದೆ. ಆತನ ರಕ್ತದ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ದಯಾನಂದ ತಿಳಿಸಿದರು.
‘ಆರೋಪಿಯು ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. ಪ್ರಕರಣವನ್ನು ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು’ ಎಂದು ಹೇಳಿದರು.
ಅಪಘಾತದ ಬಳಿಕ ಆರೋಪಿಗೆ ರಕ್ಷಣೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸದಂತೆ ಮೃತಳ ಕುಟುಂಬಕ್ಕೆ ಆರೋಪಿ ಕಡೆಯವರು ಒತ್ತಡ ಹೇರಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಟ್ರಾವೆಲ್ ಸಂಸ್ಥೆಯೊಂದರ ಮಾಲೀಕರ ಪುತ್ರ ಆರೋಪಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.