ADVERTISEMENT

ಪ್ರಯಾಣಿಕರಿಗೆ ಅಪಘಾತ ವಿಮೆ | ಬಿಎಂಟಿಸಿಗೂ ವಿಸ್ತರಿಸಿ: ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 14:37 IST
Last Updated 1 ಜುಲೈ 2024, 14:37 IST
ನಗರದಲ್ಲಿ ಸೋಮವಾರ ಬಿಎಂಟಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಯಾಸ್’ ಯೋಜನೆಯಡಿ ನೌಕರರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪಿಂಚಣಿ ಪಾವತಿ ಆದೇಶ ಪತ್ರ ವಿತರಣೆ ಮಾಡಿದರು -ಪ್ರಜಾವಾಣಿ ಚಿತ್ರ
ನಗರದಲ್ಲಿ ಸೋಮವಾರ ಬಿಎಂಟಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಯಾಸ್’ ಯೋಜನೆಯಡಿ ನೌಕರರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪಿಂಚಣಿ ಪಾವತಿ ಆದೇಶ ಪತ್ರ ವಿತರಣೆ ಮಾಡಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೆ ₹ 10 ಲಕ್ಷ ವಿಮೆ ಒದಗಿಸುವ ಯೋಜನೆ ಕೆಎಸ್‌ಆರ್‌ಟಿಸಿಯಲ್ಲಿದೆ. ಅದನ್ನು ಬಿಎಂಟಿಸಿಗೂ ವಿಸ್ತರಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.

58 ವರ್ಷ ಪೂರ್ಣಗೊಂಡ ಬಿಎಂಟಿಸಿ ನೌಕರರಿಗೆ ‘ಪ್ರಯಾಸ್‌’ ಯೋಜನೆಯಡಿ ಪಿಂಚಣಿ ಸೌಲಭ್ಯ ಆದೇಶ ಪತ್ರಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.

‘ಬಿಎಂಟಿಸಿ ಬಸ್‌ ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೆ ₹ 1 ಲಕ್ಷ ನೀಡಲಾಗುತ್ತಿದೆ. ವಿಮೆ ಮೊತ್ತವನ್ನು ₹ 10 ಲಕ್ಷಕ್ಕೆ ಹೆಚ್ಚಿಸಬೇಕು. ನೌಕರರು ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ₹ 1 ಕೋಟಿ ವಿಮೆ ಸಿಗುವಂತೆ ಮಾಡಲಾಗಿದೆ. ಬೇರೆ ಕಾರಣಗಳಿಂದ ಮೃತಪಟ್ಟರೆ ₹ 10 ಲಕ್ಷ ನೀಡಲಾಗುತ್ತಿದೆ. ಇದರಿಂದ ನೌಕರರ ಕಳೆದುಕೊಂಡು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಲಿದೆ’ ಎಂದು ಹೇಳಿದರು.

ADVERTISEMENT

‘ನೌಕರರು ನಿವೃತ್ತಿ ಬಳಿಕ ಪಿಂಚಣಿಗಾಗಿ ಅಲೆದಾಡುವುದನ್ನು ತಪ್ಪಿಸಲು ಭವಿಷ್ಯ ನಿಧಿ ಕಚೇರಿಯ ‘ಪ್ರಯಾಸ್‌’ ಯೋಜನೆ ಬಳಸಿಕೊಂಡು ನಿವೃತ್ತಿಯಾದ ಕೂಡಲೇ ಪಿಂಚಣಿ ಮೊತ್ತ ಸಿಗುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧಿಕಾರಿಗಳು ಮಾಡಿದ್ದಾರೆ. ಮೊದಲೇ ದಾಖಲೆಗಳನ್ನು ಒದಗಿಸಿ, ಮೂರು ವರ್ಷದಲ್ಲಿ ನಿವೃತ್ತರಾದ 160 ನೌಕರರು ಈ ಸೌಲಭ್ಯದ ಸದುಪಯೋಗಪಡಿಸಿಕೊಂಡಿದ್ದಾರೆ. ಈಗ ನೂರಕ್ಕೂ ಅಧಿಕ ನೌಕರರಿಗೆ ಪಿಂಚಣಿ ಆದೇಶ ಪತ್ರ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತೆ ಟಿ.ಇಂದಿರಾ, ‘ಪ್ರಯಾಸ್‌ ಯೋಜನೆಯನ್ನು ಬಹುತೇಕ ಇಲಾಖೆಗಳಲ್ಲಿ ಬಳಸಿಕೊಳ್ಳುತ್ತಿಲ್ಲ. ನೌಕರರು ನಿವೃತ್ತಿ ಬಳಿಕ ನಮ್ಮ ಕಚೇರಿಗೆ ಅಲೆಯುವುದು ತಪ್ಪಿಲ್ಲ. ಬಿಎಂಟಿಸಿ ಮಾತ್ರ ಪ್ರಯಾಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ’ ಎಂದು ಶ್ಲಾಘಿಸಿದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್., ನಿರ್ದೇಶಕಿ (ಮಾಹಿತಿ ತoತ್ರಜ್ಞಾನ) ಶಿಲ್ಪಾ ಎಂ., ನಿರ್ದೇಶಕಿ (ಸಿಬ್ಬಂದಿ ಮತ್ತು ಜಾಗೃತಿ) ನಂದಿನಿದೇವಿ ಕೆ. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.