ADVERTISEMENT

ಮೇಖ್ರಿ ವೃತ್ತದಲ್ಲಿ ಸಂಭವಿಸಿದ್ದ ಸರಣಿ ಅಪಘಾತ: ನಲಪಾಡ್‌ಗೆ ನೋಟಿಸ್

ಶರಣಾಗಲು ಬಂದು ಸಿಕ್ಕಿಬಿದ್ದ ಬಾಡಿಗಾರ್ಡ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 19:46 IST
Last Updated 11 ಫೆಬ್ರುವರಿ 2020, 19:46 IST
ಮೊಹಮದ್ ನಲಪಾಡ್
ಮೊಹಮದ್ ನಲಪಾಡ್   

ಬೆಂಗಳೂರು: ‘ಮೇಖ್ರಿ ವೃತ್ತದ ಕೆಳಸೇತುವೆಯಲ್ಲಿ ಭಾನುವಾರ ಸಂಭವಿಸಿದ್ದ ಸರಣಿ ಅಪಘಾತಕ್ಕೆ ಶಾಸಕ ಎನ್‌.ಎ.ಹ್ಯಾರಿಸ್‌ ಮಗ ಮೊಹಮದ್ ನಲಪಾಡ್‌ ಕಾರಣ’ ಎಂಬ ಸಂಗತಿ ಪೊಲೀಸರ ತನಿಖೆಯಿಂದಬಯಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸದಾಶಿವನಗರ ಸಂಚಾರ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನಲಪಾಡ್‌ಗೆ ಮಂಗಳವಾರ ನೋಟಿಸ್‌ ನೀಡಿದ್ದಾರೆ.

ಮ್ಯಾಗ್ರತ್ ರಸ್ತೆಯಲ್ಲಿರುವ ನಲಪಾಡ್ ಮನೆಗೆ ಮಂಗಳವಾರ ಮಧ್ಯಾಹ್ನ ಪೊಲೀಸರು ಹೋಗಿದ್ದರು. ನಲಪಾಡ್ ಮನೆಯಲ್ಲಿ ಇರಲಿಲ್ಲ. ಅವರ ಆಪ್ತ ಸಹಾಯಕನ ಕೈಗೆ ನೋಟಿಸ್‌ ಕೊಟ್ಟು ಬಂದಿದ್ದಾರೆ. ನೋಟಿಸ್‌ ನೋಡಲು ನಲಪಾಡ್ ಹಿಂದೇಟು ಹಾಕುತ್ತಿರುವುದಾಗಿ ಮೂಲಗಳು ಹೇಳಿವೆ.

‘ಅಪಘಾತ ಸಂಬಂಧ ಈಗಾಗಲೇ ಹಿಟ್‌ ಆ್ಯಂಡ್‌ ರನ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತದಲ್ಲಿ ನಲಪಾಡ್ ಪಾತ್ರವಿರುವುದಕ್ಕೆ ಪುರಾವೆಗಳು ಸಿಕ್ಕಿದ್ದು, ಅದನ್ನು ಆಧರಿಸಿ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ. ಠಾಣೆ ಇನ್‌ಸ್ಪೆಕ್ಟರ್ ಅವರೇ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಹೇಳಿದರು.

ADVERTISEMENT

‘ಪ್ರಕರಣವು ಗಂಭೀರ ಸ್ವರೂಪದ್ದಾಗಿದೆ. ನೋಟಿಸ್ ಸ್ವೀಕರಿಸಿದ ತಕ್ಷಣ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಆಕಸ್ಮಾತ್ ಬರದಿದ್ದರೆ ಅವರನ್ನು ಬಂಧಿಸುವ ಅಧಿಕಾರ ತನಿಖಾಧಿಕಾರಿಯೂ ಆಗಿರುವ ಇನ್‌ಸ್ಪೆಕ್ಟರ್‌ ಅವರಿಗೆ ಇದೆ’ ಎಂದು ಅವರು ವಿವರಿಸಿದರು.

ಶರಣಾಗಲು ಬಂದು ಸಿಕ್ಕಿಬಿದ್ದ ಬಾಡಿಗಾರ್ಡ್‌: ‘ಭಾನುವಾರ ಮಧ್ಯಾಹ್ನ (ಫೆ. 9) 2.30ರ ಸುಮಾರಿಗೆ ಬೆಂಟ್ಲೆ ಕಾರೊಂದು (ಟಿಎಸ್ 09, ಯುಸಿ 0009) ಮೇಖ್ರಿ ವೃತ್ತದ ಕೆಳಸೇತುವೆಯಲ್ಲಿ ಬೈಕ್, ಕಾರು ಹಾಗೂ ಆಟೊಗೆ ಗುದ್ದಿತ್ತು. ಅವಘಡದಲ್ಲಿ ಕಾರು ಚಾಲಕ ಸುಹೇಲ್ (31), ಬೈಕ್ ಸವಾರ, ಆಟೊದಲ್ಲಿದ್ದ ಸಬಿಹಾ (28) ಹಾಗೂ ಆರು ವರ್ಷದ ಬಾಲಕನಿಗೆ ಗಾಯವಾಗಿತ್ತು. ಅವರೆಲ್ಲರನ್ನೂ ಸ್ಥಳೀಯರೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸುಹೇಲ್ ಅವರ ಕಾಲಿಗೆ ತೀವ್ರ ಪೆಟ್ಟಾಗಿದ್ದು, ನಡೆದಾಡಲು ಆಗುತ್ತಿಲ್ಲ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು. ಸೋಮವಾರ ಠಾಣೆಗೆ ಬಂದಿದ್ದ ಬಾಲಕೃಷ್ಣ, ತಾನೇ ಚಾಲಕ ಎಂಬುದಾಗಿ ಹೇಳಿದ್ದರು. ಅವರ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಅವರು ಚಾಲಕ ಅಲ್ಲ, ಬದಲಿಗೆ ನಲಪಾಡ್ ಬಾಡಿಗಾರ್ಡ್‌ ಎಂಬುದು ತಿಳಿಯಿತು’ ಎಂದು ಮೂಲಗಳು ತಿಳಿಸಿವೆ.

‘ತನ್ನ ಕೃತ್ಯವನ್ನು ಮುಚ್ಚಿಟ್ಟುಕೊಳ್ಳಲು ನಲಪಾಡ್‌ ತಮ್ಮ ಬಾಡಿಗಾರ್ಡ್‌ನನ್ನು ಠಾಣೆಗೆ ಕಳುಹಿಸಿರುವ ಸಾಧ್ಯತೆ ಇದೆ. ಬಾಲಕೃಷ್ಣ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡು ನಲಪಾಡ್‌ಗೆ ನೋಟಿಸ್‌ ನೀಡಲಾಗಿದೆ. ಅವರ ಸ್ನೇಹಿತರನ್ನೂ ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ’ ಎಂದು ಮೂಲಗಳು ಹೇಳಿವೆ.

ಉದ್ಯಮಿ ಮಗನ ಹತ್ಯೆಗೂ ಯತ್ನಿಸಿದ್ದ ಆರೋಪ

ಉದ್ಯಮಿ ಲೋಕನಾಥನ್‌ಪುತ್ರ ವಿದ್ವತ್ (24) ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದಡಿ ಮೊಹಮದ್ ನಲಪಾಡ್ (24) ಜೈಲಿಗೂ ಹೋಗಿಬಂದಿದ್ದರು. ಈ ಪ್ರಕರಣದ ಬಗ್ಗೆ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ.

ಯು.ಬಿ. ಸಿಟಿಯ ಫರ್ಜಿ ಕೆಫೆಯಲ್ಲಿ 2018ರ ಫೆ. 17ರಂದು ರಾತ್ರಿ ಊಟಕ್ಕೆ ಹೋಗಿದ್ದ ವಿದ್ವತ್ ಮೇಲೆ ನಲಪಾಡ್ ಹಲ್ಲೆ ಮಾಡಿದ್ದರು. ಕೊಲೆ ಯತ್ನ (ಐಪಿಸಿ 307), ಗಂಭೀರ ಸ್ವರೂಪದ ಹಲ್ಲೆ (ಐಪಿಸಿ 326), ಅಕ್ರಮ ಬಂಧನ (ಐಪಿಸಿ 341), ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಎಫ್‌ಐಆರ್‌ ದಾಖಲಾಗಿತ್ತು.

ಮದ್ಯದ ಅಮಲಿನಲ್ಲಿದ್ದ ಅನುಮಾನ?

‘ನಲಪಾಡ್ ಹಾಗೂ ಆತನ ಸ್ನೇಹಿತರು ಐದು ಕಾರುಗಳಲ್ಲಿ ಚಾಲುಕ್ಯ ವೃತ್ತದಿಂದ ವಿಮಾನ ನಿಲ್ದಾಣದತ್ತ ಹೊರಟಿದ್ದರು. ಪಾನಮತ್ತರಾಗಿಯೇ ನಲಪಾಡ್ಬೆಂಟ್ಲೆ ಕಾರು ಚಲಾಯಿಸುತ್ತಿದ್ದರು. ಅಪಘಾತ ಸಂಭವಿಸುತ್ತಿದ್ದಂತೆ ಕೆಳಗೆ ಇಳಿದಿದ್ದ ಅವರನ್ನು ಹಲವರು ನೋಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತಾವು ಪಾನಮತ್ತರಾಗಿದ್ದರಿಂದ ಪೊಲೀಸರು ಬಂದರೆ ಪರೀಕ್ಷಿಸಬಹುದೆಂದು ತಿಳಿದ ನಲಪಾಡ್, ಸ್ನೇಹಿತರ ಕಾರಿನಲ್ಲಿ ಸ್ಥಳದಿಂದ ಹೊರಟು ಹೋಗಿದ್ದಾರೆ. ವಿಚಾರಣೆಗೆ ಬಂದಾಗ ಈ ಬಗ್ಗೆಯೂ ಮಾಹಿತಿ ಪಡೆಯಬೇಕಿದೆ’ ಎಂದು ಮೂಲಗಳು ಹೇಳಿವೆ. ‘ಅಜಾಗರೂಕತೆಯಿಂದ ವಾಹನ ಚಲಾಯಿಸಿ ಜೀವಕ್ಕೆ ಕುತ್ತು ತಂದ (ಐಪಿಸಿ 279),ಅಜಾಗರೂಕ ಚಾಲನೆ (ಐಪಿಸಿ 337) ಆರೋಪ ಹಾಗೂ ಕೇಂದ್ರ ಮೋಟಾರ್ ವಾಹನಗಳ ಕಾಯ್ದೆಯಡಿ ಸದ್ಯ ಪ್ರಕರಣ ದಾಖಲಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಬಾಲಕೃಷ್ಣನನ್ನೇ ಫಿಕ್ಸ್ ಮಾಡಿ’

ನೋಟಿಸ್ ಸುದ್ದಿ ತಿಳಿಯುತ್ತಿದ್ದಂತೆ ಸದಾಶಿವನಗರ ಠಾಣೆ ಇನ್‌ಸ್ಪೆಕ್ಟರ್‌ ಅವರಿಗೆ ಕರೆ ಮಾಡಿದ್ದ ಶಾಸಕ ಎನ್‌.ಎ. ಹ್ಯಾರಿಸ್, ‘ಅಪಘಾತ ಮಾಡಿರುವುದಾಗಿ ಬಾಲಕೃಷ್ಣನೇ ಠಾಣೆಗೆ ಬಂದಿದ್ದಾನಲ್ಲ. ಆತನನ್ನೇ ಪ್ರಕರಣದಲ್ಲಿ ಫಿಕ್ಸ್ ಮಾಡಿ’ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಲು ಎನ್‌.ಎ.ಹ್ಯಾರಿಸ್‌ ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.