ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡ ದ್ವಿಚಕ್ರ ವಾಹನದ ಸವಾರನನ್ನು ಸ್ಥಳೀಯ ಆಟೊ ಚಾಲಕರು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ, ದುಷ್ಕರ್ಮಿಗಳು ಅಪಘಾತದ ಸ್ಥಳದಲ್ಲಿದ್ದ ವಾಹನವನ್ನೇ ಕದ್ದೊಯ್ದಿದ್ದಾರೆ.
ಆ ಸಂಬಂಧ ಸದಾಶಿವನಗರ ಠಾಣೆಗೆ ದೂರು ನೀಡಿರುವ ಸವಾರ ಆರ್. ಮಂಜುನಾಥ್, ‘₹45 ಸಾವಿರ ಮೌಲ್ಯದ ವಾಹನವನ್ನು ದುಷ್ಕರ್ಮಿಗಳು ಕದ್ದುಕೊಂಡು ಹೋಗಿದ್ದಾರೆ. ಆ ವಾಹನ ನನ್ನ ಪತ್ನಿ ಹೆಸರಿಗಿದೆ. ಹುಡುಕಿಕೊಡಿ’ ಎಂದು ಕೋರಿದ್ದಾರೆ.
‘ಅಕ್ಟೋಬರ್ 27ರಂದು ರಾತ್ರಿ 11.30 ಗಂಟೆಗೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟಿದ್ದೆ. ಬಳ್ಳಾರಿ ರಸ್ತೆಯ ರಾಯಲ್ ಎನ್‌ಫೀಲ್ಡ್ ಶೋರೂಂ ಸಮೀಪ ಅಪರಿಚಿತ ವಾಹನವೊಂದು ಗುದ್ದಿದ್ದರಿಂದ, ಕೆಳಗೆ ಬಿದ್ದೆ. ಎಡಕಣ್ಣು, ಮೈ–ಕೈಗೆ ತೀವ್ರ ಗಾಯವಾಗಿತ್ತು’ ಎಂದು ಮಂಜುನಾಥ್ ದೂರಿನಲ್ಲಿ ತಿಳಿಸಿದ್ದಾರೆ.
‘ಸಹಾಯಕ್ಕೆ ಬಂದ ಆಟೊ ಚಾಲಕರು, ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದ್ದರು. ನನ್ನ ವಾಹನಕ್ಕೆ ಬೀಗ ಹಾಕಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದರು. ನಂತರ, ನನ್ನನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಾನು ನಸುಕಿನಲ್ಲಿ ಸ್ಥಳಕ್ಕೆ ಹೋಗಿ ನೋಡಿದಾಗ ವಾಹನವೇ ಇರಲಿಲ್ಲ. ಯಾರೋ ಕಳವು ಮಾಡಿಕೊಂಡು ಹೋಗಿದ್ದರು. ತೀವ್ರ ಗಾಯವಾಗಿದ್ದರಿಂದ ಮನೆಗೆ ಹೋಗಿ ವಿಶ್ರಾಂತಿ ಪಡೆದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಈಗ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ’ ಎಂದು ದೂರಿನಲ್ಲಿ ಬರೆದಿದ್ದಾರೆ.
ಸದಾಶಿವನಗರ ಪೊಲೀಸರು, ‘ದ್ವಿಚಕ್ರ ವಾಹನಕ್ಕಾಗಿ ಹುಡುಕಾಟ ನಡೆಸಿದ್ದು, ಸದ್ಯಕ್ಕೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಪಘಾತ ಸ್ಥಳದ ಸಮೀಪದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.