ಬೆಂಗಳೂರು: ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಉರುಳಿ ಬಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂತೋಷ್‌ಕುಮಾರ್ (15) ಮೃತಪಟ್ಟಿದ್ದಾನೆ.
‘ವಿದ್ಯಾರಣ್ಯಪುರದ ಸಂತೋಷ್‌ಕುಮಾರ್, ಬೈಕ್ ಚಾಲನೆ ಕಲಿಯಲೆಂದು ರಸ್ತೆಗೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಅತೀ ವೇಗ ಹಾಗೂ ಅಜಾಗರೂಕತೆ ಚಾಲನೆ ಮಾಡಿದ್ದಕ್ಕಾಗಿ ಆತನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಯಲಹಂಕ ಸಂಚಾರ ಪೊಲೀಸರು ಹೇಳಿದರು.
‘ಉದ್ಯಮಿಯೊಬ್ಬರ ಮಗನಾದ ಸಂತೋಷ್‌ಕುಮಾರ್, ಭಾನುವಾರ ಮನೆಯಲ್ಲಿದ್ದ. ಪೋಷಕರ ಗಮನಕ್ಕೆ ಬಾರದಂತೆ ಬೈಕ್ ತೆಗೆದುಕೊಂಡು ವಿದ್ಯಾರಣ್ಯಪುರದ ಜೋಡು ರಸ್ತೆಗೆ ಬಂದಿದ್ದ. ಮಾರ್ಗಮಧ್ಯೆ ರಸ್ತೆ ವಿಭಜಕಕ್ಕೆ ಗುದ್ದಿದ್ದ ಬೈಕ್, ಸ್ಥಳದಲ್ಲೇ ಉರುಳಿಬಿದ್ದಿತ್ತು.’
‘ರಸ್ತೆಯಲ್ಲಿ ಬಿದ್ದು ನರಳುತ್ತಿದ್ದ ಸಂತೋಷ್‌ಕುಮಾರ್‌ನನ್ನು ಸ್ಥಳೀಯರು, ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ತೀವ್ರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಯಲಹಂಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತಪಾಸಣೆ ನಡೆಸಿದ್ದ ಅಲ್ಲಿಯ ವೈದ್ಯರು, ಮಾರ್ಗಮಧ್ಯೆಯೇ ಸಂತೋಷ್‌ಕುಮಾರ್ ಮೃತಪಟ್ಟಿರುವುದಾಗಿ ಹೇಳಿದರು. ಆರಂಭದಲ್ಲಿ ಬಾಲಕನ ಹೆಸರು ಗೊತ್ತಾಗಿರಲಿಲ್ಲ. ಬೈಕ್ ನೋಂದಣಿ ಸಂಖ್ಯೆ ಆಧರಿಸಿ ವಿಳಾಸ ಪತ್ತೆ ಮಾಡಿ, ಮನೆಗೆ ಹೋಗಿ ವಿಚಾರಿಸಿದಾಗ ಹೆಸರು ತಿಳಿಯಿತು’ ಎಂದೂ ಪೊಲೀಸರು ವಿವರಿಸಿದರು.
‘ಮನೆ ಮುಂದೆ ಮಾತ್ರ ಬೈಕ್ ಚಾಲನೆ ಕಲಿಯುತ್ತಿದ್ದ ಸಂತೋಷ್, ಭಾನುವಾರ ಜೋಡು ರಸ್ತೆಗೆ ಬಂದಿದ್ದ. ಚಾಲನಾ ಪರವಾನಗಿ ಇಲ್ಲದಿದ್ದರಿಂದ ಆತನಿಗೆ ಬೈಕ್ ಕೊಟ್ಟಿರುವ ಪೋಷಕರ ವಿರುದ್ಧವೂ ಕ್ರಮ ಜರುಗಿಸಲು ಚಿಂತನೆ ನಡೆದಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.