ಬೆಂಗಳೂರು: ನಕಲಿ ಐ.ಡಿ ಬಳಸಿಕೊಂಡು ಲಕ್ಷಾಂತರ ರೂಪಾಯಿ ಸಾಲ ಮಂಜೂರು ಮಾಡಿಕೊಂಡು ರಾಜ್ಯ ಸರ್ಕಾರಕ್ಕೆ ವಂಚಿಸುತ್ತಿದ್ದ ಆರೋಪದಡಿ ನಾಲ್ವರನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
ರೆಹಮತ್ ನಗರದ ಇಮ್ರಾನ್ ಖಾನ್ (30), ಪ್ಯಾಲೇಸ್ ಗುಟ್ಟಹಳ್ಳಿ ಮೊಹಮ್ಮದ್ ಇಕ್ಬಾಲ್ (47), ಹೆಣ್ಣೂರಿನ ಎಚ್‌ಬಿಆರ್ ಲೇಔಟ್‌ನ ಮುಲ್ತಾನಿ ಇಫ್ತಿಕರ್ ಹಾಗೂ ಸುಲ್ತಾನ್ ಪಾಷಾ ಬಂಧಿತರು. ಎರಡು ಲ್ಯಾಪ್‌ಟಾಪ್, ಕೋಟಕ್ ಮಹೇಂದ್ರ ಬ್ಯಾಂಕ್‌ನ ನಕಲಿ ಸೀಲುಗಳನ್ನು ಜಪ್ತಿ ಮಾಡಲಾಗಿದೆ.
‘ಬಂಧಿತ ಆರೋಪಿಗಳು, ಕರ್ನಾಟಕ ಮೈನಾರಿಟಿಸ್ ಕಾರ್ಪೊರೇಷನ್ ಲಿಮಿಟೆಡ್ ಹೆಸರಿನಲ್ಲಿ ಗಂಗಾನಗರದ ವಸಂತಪ್ಪ ಬ್ಲಾಕ್‌ನಲ್ಲಿ ಕಚೇರಿ ತೆರೆದಿದ್ದರು. ನಕಲಿ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಸೃಷ್ಟಿಸಿಕೊಂಡಿದ್ದ ಆರೋಪಿಗಳು, ಅದನ್ನು ಬಳಸಿಕೊಂಡು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ‘WWW.KMDC.NIC.ARIVU-2’ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗುತ್ತಿದ್ದರು. ಆ ಮೂಲಕ ಕಾಲೇಜು ಶಿಕ್ಷಣಕ್ಕೆಂದು ಸಾಲ ಮಂಜೂರು ಮಾಡಿಕೊಂಡು ವಂಚಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಆರೋಪಿಗಳ ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿತ್ತು. ವಿಶೇಷ ತಂಡ ರಚಿಸಿಕೊಂಡು ಕಚೇರಿ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು. ಅವರು ಯಾವ ರೀತಿ ಹಣ ಮಂಜೂರು ಮಾಡಿಕೊಂಡಿದ್ದರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.