ಬೆಂಗಳೂರು: ನಟಿ ಸಂಯುಕ್ತ ಹೆಗಡೆ ಜೊತೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪದಡಿ ಎಚ್‌ಎಸ್‌ಆರ್ ಲೇಔಟ್‌ನ ಅಗರ ಕೆರೆ ಸಮಿತಿಯ ಸದಸ್ಯೆ ಕವಿತಾ ರೆಡ್ಡಿ ಅವರನ್ನು ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದ್ದು, ನ್ಯಾಯಾಲಯದ ನಿರ್ದೇಶನದಂತೆ ಠಾಣಾ ಜಾಮೀನು ಮೇಲೆ ಸಂಜೆ ಬಿಡುಗಡೆ ಸಹ ಮಾಡಿದ್ದಾರೆ.
‘ಗಲಾಟೆ ಸಂಬಂಧ ಸಂಯುಕ್ತ ಅವರು ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ದಾಖಲಾಗಿತ್ತು. ಕವಿತಾ ರೆಡ್ಡಿ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು. ಕವಿತಾ ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.
‘ಸಂಯುಕ್ತ ಹಾಗೂ ಸ್ನೇಹಿತರು, ನಿತ್ಯವೂ ಅಗರ ಕೆರೆ ಆವರಣದಲ್ಲಿ ವ್ಯಾಯಾಮ ಮಾಡಲು ಹೋಗಿ ಬರುತ್ತಿದ್ದರು. ಇದೇ 4ರಂದು ಸಂಜೆ ಸಹ ವ್ಯಾಯಾಮ ಮಾಡುತ್ತಿದ್ದರು. ಸ್ಥಳಕ್ಕೆ ಬಂದು ಪ್ರಶ್ನಿಸಿದ್ದ ಕವಿತಾ ರೆಡ್ಡಿ, ಅನಿಲ್ ರೆಡ್ಡಿ ಹಾಗೂ ಇತರರು, ‘ಸಾರ್ವಜನಿಕವಾಗಿ ತುಂಡು ಬಟ್ಟೆ ಧರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದೀರಿ’ ಎಂದು ನಟಿಯನ್ನು ಅವಾಚ್ಯವಾಗಿ ನಿಂದಿಸಿದ್ದರು. ಹಲ್ಲೆಗೂ ಯತ್ನಿಸಿದ್ದರು. ಈ ಸಂಗತಿ ಸಂಯುಕ್ತ ಅವರ ದೂರಿನಲ್ಲಿತ್ತು.’
‘ಡ್ರಗ್ಸ್ ಸೇವಿಸಿ ವ್ಯಾಯಾಮ ಮಾಡಲು ಉದ್ಯಾನಕ್ಕೆ ಬಂದಿದ್ದೀರಾ’ ಎಂದು ಆರೋಪಿಗಳು ನಿಂದಿಸಿದ್ದರು. ಗಲಾಟೆ ದೃಶ್ಯವನ್ನು ಸಂಯುಕ್ತ ಅವರು ವಿಡಿಯೊ ಮಾಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದೇ ವಿಡಿಯೊವನ್ನು ಪುರಾವೆಯಾಗಿ ಪರಿಗಣಿಸಲಾಗಿದೆ. ತಲೆಮರೆಸಿಕೊಂಡಿರುವ ಅನಿಲ್ ರೆಡ್ಡಿ ಮತ್ತು ಇತರರಿಗಾಗಿ ಹುಡುಕಾಟ ನಡೆದಿದೆ’ ಎಂದೂ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.