ADVERTISEMENT

ಟ್ಯಾಬ್‌ನಿಂದ ಮಕ್ಕಳಿಗೆ ‘ಏಸರ್ ವಿಷನೋವ’ ಚಿಕಿತ್ಸೆ

ನಾರಾಯಣ ನೇತ್ರಾಲಯ–ಏಸರ್ ಸಹಭಾಗಿತ್ವ

​ಪ್ರಜಾವಾಣಿ ವಾರ್ತೆ
Published 4 ಮೇ 2022, 16:11 IST
Last Updated 4 ಮೇ 2022, 16:11 IST
ನಾರಾಯಣ ನೇತ್ರಾಲಯದ ಅಧ್ಯಕ್ಷ ಕೆ.ಭುಜಂಗ ಶೆಟ್ಟಿ ಹಾಗೂ ಏಸರ್‌ ಸಂಸ್ಥೆಯ ಹರೀಶ್‌ ಕೊಹ್ಲಿ ಅವರು ‘ಏಸರ್ ವಿಷನೋವ’ ಸಾಫ್ಟ್‌ವೇರ್‌ ಹೊಂದಿರುವ ಟ್ಯಾಬ್‌ ಅನ್ನು ಪೋಷಕರಿಗೆ ವಿತರಿಸಿದರು –ಪ್ರಜಾವಾಣಿ ಚಿತ್ರ
ನಾರಾಯಣ ನೇತ್ರಾಲಯದ ಅಧ್ಯಕ್ಷ ಕೆ.ಭುಜಂಗ ಶೆಟ್ಟಿ ಹಾಗೂ ಏಸರ್‌ ಸಂಸ್ಥೆಯ ಹರೀಶ್‌ ಕೊಹ್ಲಿ ಅವರು ‘ಏಸರ್ ವಿಷನೋವ’ ಸಾಫ್ಟ್‌ವೇರ್‌ ಹೊಂದಿರುವ ಟ್ಯಾಬ್‌ ಅನ್ನು ಪೋಷಕರಿಗೆ ವಿತರಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾರ್ಟಿಕಲ್ ವಿಷ್ಯುವಲ್ ಇಂಪೇರ್‌ಮೆಂಟ್ (ಸಿವಿಐ) ಎನ್ನುವ ದೃಷ್ಟಿ ದುರ್ಬಲತೆ ಸಮಸ್ಯೆಯಿಂದ ನರಳುತ್ತಿರುವ ಮಕ್ಕಳಿಗೆ ‘ಏಸರ್ ವಿಷನೋವ’ ತಂತ್ರಾಂಶದ ಮೂಲಕ ಕಂಪ್ಯೂಟರ್ ಮತ್ತು ಟ್ಯಾಬ್ ಆಧಾರಿತ ಚಿಕಿತ್ಸೆ ನೀಡಲುನಾರಾಯಣ ನೇತ್ರಾಲಯ ಮತ್ತು ಏಸರ್ ಇಂಡಿಯಾ ಸಂಸ್ಥೆಗಳು ಕೈಜೋಡಿಸಿವೆ.

ನಾರಾಯಣ ನೇತ್ರಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಏಸರ್ ವಿಷನೋವ’ ಚಿಕಿತ್ಸೆಗೆ ಚಾಲನೆ ನೀಡಲಾಯಿತು. ರೋಗಿಗಳ ಪೋಷಕರಿಗೆ ವಿಷನೋವ ತಂತ್ರಾಂಶವುಳ್ಳ ಟ್ಯಾಬ್‌ ವಿತರಿಸಲಾಯಿತು.

ಸಿವಿಐ ಎನ್ನುವುದು ಮಿದುಳಿನಲ್ಲಿ ದೃಶ್ಯಕ್ಕೆ ಸಂಬಂಧಿಸಿದ ಪ್ರದೇಶಗಳಲ್ಲಿ ಉಂಟಾಗುವ ದೃಷ್ಟಿಮಾಂದ್ಯತೆ ಸ್ಥಿತಿ. ಭಾರತದಲ್ಲಿ ಒಂದು ಲಕ್ಷ ಮಕ್ಕಳಲ್ಲಿ 161 ಮಕ್ಕಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಸರಳವಾಗಿ ಚಿಕಿತ್ಸೆ ನೀಡುವ ಉದ್ದೇಶದಿಂದ ಏಸರ್ ತನ್ನ ಸಿಎಸ್‌ಆರ್‌ನಡಿ ಕಂಪ್ಯೂಟರ್‌ಗಳು ಮತ್ತು ಟ್ಯಾಬ್‌ಗಳನ್ನು ಒದಗಿಸಿದೆ.

ADVERTISEMENT

ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗ ಶೆಟ್ಟಿ,‘ ಸಿವಿಐನಿಂದ ಮಕ್ಕಳ ಮಿದುಳಿನ ದೃಶ್ಯ ಸಂಬಂಧಿತ ನರದಲ್ಲಿ ಮಂದತೆ ಉಂಟಾಗಿರುತ್ತದೆ. ಇದರಿಂದ ಮಕ್ಕಳು ದೃಶ್ಯವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಅಂತಹ ಮಕ್ಕಳಿಗೆ ವಿಷನೋವ ಚಿಕಿತ್ಸೆ ಸಹಕಾರಿ’ ಎಂದರು.

ಏಸರ್ ಇಂಡಿಯಾದ ಅಧ್ಯಕ್ಷ ಹರೀಶ್ ಕೊಹ್ಲಿ,‘ಪ್ರತಿ ಟ್ಯಾಬ್‌ಗೆ ₹15 ಸಾವಿರ ಠೇವಣಿ ಪಡೆದು, ಚಿಕಿತ್ಸೆಯ ಅವಧಿ ಮುಗಿದ ನಂತರ ಟ್ಯಾಬ್‌ ಹಿಂದಿರುಗಿಸಿದವರಿಗೆ ಹಣ ವಾಪಸ್ ನೀಡಲಾಗುವುದು. ಏಸರ್ ಇಂಡಿಯಾ 2 ಸಾವಿರ ಟ್ಯಾಬ್ ವಿತರಿಸುವ ಗುರಿ ಹೊಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.