ಬೆಂಗಳೂರು: ಜೆ.ಪಿ. ನಗರ 5ನೇ ಹಂತದಲ್ಲಿರುವ ವಸತಿ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಎಸಿಪಿ ಶೋಭಾ ಕಟಾವ್ಕರ್ (59) ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಬಗ್ಗೆ ನಗರದ ಪುಟ್ಟೇನಹಳ್ಳಿ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಾಗಿದೆ.
ನಗರದ ವಿಶೇಷ ವಿಭಾಗದ ಎಸಿಪಿ ಆಗಿದ್ದ ಶೋಭಾ ಅವರಿಗೆ ಇತ್ತೀಚೆಗಷ್ಟೇ ಎಸ್ಪಿ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಹುಬ್ಬಳ್ಳಿ ಹೆಸ್ಕಾಂ ಅಧೀಕ್ಷಕರಾಗಿಯೂ ವರ್ಗಾಯಿಸಲಾಗಿತ್ತು.
‘ಶೋಭಾ ಅವರ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು. ಸದ್ಯ ಪುತ್ರಿ, ಪುತ್ರ ಹಾಗೂ ಸೊಸೆ ಜೊತೆಯಲ್ಲಿ ವಾಸವಿದ್ದರು. ಆ ಮೂವರು ಇತ್ತೀಚೆಗೆ ಪ್ರವಾಸಕ್ಕೆ ಹೋಗಿದ್ದರು. ಹೀಗಾಗಿ, ಶೋಭಾ ಅವರೊಬ್ಬರೇ ಮನೆಯಲ್ಲಿದ್ದರು. ಶುಕ್ರವಾರ ಮಧ್ಯಾಹ್ನದಿಂದಲೇ ಶೋಭಾ ಅವರ ಮೊಬೈಲ್‌ಗೆ ಮಗ ಕರೆ ಮಾಡಿದ್ದರು. ಆದರೆ, ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ಭದ್ರತಾ ಸಿಬ್ಬಂದಿಯನ್ನು ಫ್ಲ್ಯಾಟ್ ಬಳಿ ಕಳುಹಿಸಿದಾಗಲೇ ಮೃತದೇಹ ಕಂಡಿತ್ತು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
‘ಪುಟ್ಟೇನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು. ಶನಿವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.