ADVERTISEMENT

ಗ್ರಾಹಕರಿಗೆ ಕುಂದು ಕೊರತೆ ಉಂಟಾಗದಂತೆ ಕಾರ್ಯನಿರ್ವಹಿಸಿ: ಸಚಿವ ಕೆ.ಜೆ. ಜಾರ್ಜ್‌

ಇಂಧನ ಇಲಾಖೆಯ ಎಂಜಿನಿಯರ್‌ಗಳಿಗೆ ಸಚಿವ ಕೆ.ಜೆ. ಜಾರ್ಜ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 15:44 IST
Last Updated 4 ಜುಲೈ 2024, 15:44 IST
ಕೆ.ಜೆ. ಜಾರ್ಜ್
ಕೆ.ಜೆ. ಜಾರ್ಜ್   

ಬೆಂಗಳೂರು: ಇಂಧನ ಇಲಾಖೆಯು ನಿತ್ಯ ಜನರೊಂದಿಗೆ ವ್ಯವಹರಿಸಬೇಕಾಗುತ್ತದೆ. ಗ್ರಾಹಕರಿಗೆ ಕುಂದುಕೊರತೆ ಉಂಟಾಗದಂತೆ ವ್ಯವಹರಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

ಇಂಧನ ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ 400 ಸಹಾಯಕ ಎಂಜಿನಿಯರ್‌ಗಳ ಮೂರು ದಿನಗಳ ಕಾರ್ಯಾನುಭವ ತರಬೇತಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ನೇಮಕಾತಿ ವಿಳಂಬವಾಗಿತ್ತು. ಈ ಬಗ್ಗೆ ಅಭ್ಯರ್ಥಿಗಳು ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಯತ್ನದಿಂದ ಆರು ತಿಂಗಳೊಳಗೆ ನೇಮಕಾತಿ ಆದೇಶ ನೀಡಲಾಗಿದೆ. ಈಗ ನಿಷ್ಠೆಯಿಂದ ಕೆಲಸ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ವಿದ್ಯುತ್‌ ಉತ್ಪಾದನೆ ಮತ್ತು ಸರಬರಾಜಿನಲ್ಲಿ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಜ್ಞಾನ ಬಳಸಬೇಕು ಎಂದು ಹೇಳಿದರು.

ADVERTISEMENT

ಎಂಜಿನಿಯರ್‌ಗಳ ಪ್ರಾಣ ಅತ್ಯಮೂಲ್ಯ. ವಿದ್ಯುತ್ ಪೂರೈಕೆ, ನಿರ್ವಹಣೆ ವೇಳೆ ಅತ್ಯಂತ ಜಾಗರೂಕರಾಗಿರಬೇಕು. ಸುರಕ್ಷತೆ ಬಗ್ಗೆ ಲಕ್ಷ್ಯ ಕೊಡಿ ಎಂದು ಸಚಿವರು ಮನವಿ ಮಾಡಿದರು.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್‌ಗುಪ್ತಾ ಮಾತನಾಡಿ, ‘ಕಲಿಕೆ ಈ ಮೂರು ದಿನಗಳ ಕಾರ್ಯಾನುಭವ ತರಬೇತಿಗೆ ನಿಲ್ಲುವುದಿಲ್ಲ. ಸೇವಾವಧಿಯುದ್ದಕ್ಕೂ ಮುಂದುವರಿಯುತ್ತದೆ. ಕಲಿಯವ ಉತ್ಸಾಹ ಕಳೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.

ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ಮಾತನಾಡಿ, ‘ಎಂಜಿನಿಯರಿಂಗ್ ಕೌಶಲ ಕಾಲಕ್ಕೆ ತಕ್ಕಂತೆ ನವೀಕರಣಗೊಳ್ಳುತ್ತಿರಬೇಕು. ಅದಕ್ಕಾಗಿ ನಮ್ಮ ಇಲಾಖೆಯ ಎಂಜಿನಿಯರ್‌ಗಳನ್ನು ಬೇರೆ ರಾಜ್ಯ ಹಾಗೂ ದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಕೆಇಬಿ ಎಂಜಿನಿಯರ್ಸ್ ಅಸೋಸಿಷಯನ್‌ ಪದಾಧಿಕಾರಿಗಳಾದ ಬಸವರಾಜು, ಸುಧಾರಕರ್‌ ರೆಡ್ಡಿ ಶಿವಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.