ಬೆಂಗಳೂರು: ‘ಸನಾತನ ಧರ್ಮದ ಮಹತ್ವ ತಿಳಿಯದೆ ಇರುವವರು ಅದರ ಬಗ್ಗೆ ಕೆಟ್ಟದಾಗಿ ಟೀಕೆ ಮಾಡುತ್ತಿದ್ದಾರೆ. ಅಜ್ಞಾನದಿಂದ ಮಾತನಾಡಿದವರನ್ನು ತಿದ್ದುವ ಕೆಲಸವಾಗಬೇಕು’ ಎಂದು ಚಲನಚಿತ್ರ ನಟ ಅನಂತ ನಾಗ್ ಹೇಳಿದರು.
ಭಾರತೀಯ ವಿದ್ಯಾಭವನ ಮತ್ತು ಸುಚಿತ್ರ ಫಿಲಂ ಸೊಸೈಟಿ ಜಂಟಿಯಾಗಿ ‘ಪ್ರಜಾವಾಣಿ’ ಮಾಧ್ಯಮ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡ ಮೂರು ದಿನಗಳ ಅನಂತ ನಾಗ್ ಉತ್ಸವ ಶುಕ್ರವಾರ ಸಂಪನ್ನವಾಯಿತು. ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು.
‘ಸಾವಿರಾರು ವರ್ಷಗಳಿಂದ ಸನಾತನ ಧರ್ಮ ಬೆಳೆದು ಬಂದಿದ್ದು, ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ. ಈ ಧರ್ಮದ ಬಗ್ಗೆ ನನಗೆ ಅಭಿಮಾನ, ಭಕ್ತಿ, ಗೌರವ, ಪ್ರೀತಿಯಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದ ಬಳಿಕ ಈಗ ಎಲ್ಲಿ ನೋಡಿದರೂ ಸನಾತನ ಧರ್ಮವನ್ನು ಅವಹೇಳನ ಮಾಡಲಾಗುತ್ತಿದೆ. ಇದು ಆತಂಕವನ್ನುಂಟು ಮಾಡುತ್ತಿದೆ. ಕೈಲಾಗದವರು ಮೈ ಪರಚಿಕೊಳ್ಳುತ್ತಾರೆ. ಆದ್ದರಿಂದ ಭಾರತೀಯ ವಿದ್ಯಾಭವನವು ಪ್ರತಿಯೊಂದು ತಾಲ್ಲೂಕಿನಲ್ಲಿಯೂ ಕಾರ್ಯನಿರ್ವಹಿಸಿ, ಸನಾತನ ಧರ್ಮದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಿ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.