ಬೆಂಗಳೂರು: ‘ಬ್ರಾಹ್ಮಣ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ನಟ ಚೇತನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಅವರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಸೋಮವಾರ ದೂರು ನೀಡಿದ್ದಾರೆ.
ಇದರ ಬೆನ್ನಲ್ಲೇ, ಮಂಗಳವಾರ ಕಮಿಷನರ್‌ಗೆ ಇ–ಮೇಲ್ ಮೂಲಕ ದೂರು ಕಳುಹಿಸಿರುವ ವಿಜಯನಗರದ ಕಾವ್ಯಾ ಅಚ್ಯುತ್, ‘ಸರ್ಕಾರಿ ಸಂಸ್ಥೆಯ ಹೆಸರು ಹಾಗೂ ಮುದ್ರೆಯನ್ನು ಸಚ್ಚಿದಾನಂದಮೂರ್ತಿ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ಎರಡೂ ದೂರುಗಳನ್ನು ಸ್ವೀಕರಿಸಿರುವ ಕಮಿಷನರ್, ಕ್ರಮದ ಭರವಸೆ ನೀಡಿದ್ದಾರೆ.
ಸಂಸ್ಥೆಗಳ ಮನವಿ ಆಧರಿಸಿ ದೂರು: ‘ಚೇತನ್ ಅವರ ಹೇಳಿಕೆ ಬ್ರಾಹ್ಮಣ ಸಮುದಾಯದವರಿಗೆ ಬೇಸರ ಉಂಟು ಮಾಡಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯದ ವಿವಿಧ ಬ್ರಾಹ್ಮಣ ಸಂಘ ಸಂಸ್ಥೆಗಳು ನನಗೆ ಮನವಿ ಮಾಡಿದ್ದವು. ಹೀಗಾಗಿ, ಚೇತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ’ ಎಂದು ಸಚ್ಚಿದಾನಂದ ಮೂರ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಅಶಾಂತಿ ಸೃಷ್ಟಿಗೆ ಯತ್ನ: ‘ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರ ಅಭಿವೃದ್ಧಿಗೆ ಮಂಡಳಿ ಯಾವುದೇ ಕೆಲಸ ಮಾಡುತ್ತಿಲ್ಲ. ನಟ ಚೇತನ್ ವಿರುದ್ಧ ದೂರು ನೀಡುವ ಮೂಲಕ ಬ್ರಾಹ್ಮಣ ಸಮುದಾಯದವರನ್ನು ಎತ್ತಿ ಕಟ್ಟಿ ಅಶಾಂತಿ ಸೃಷ್ಟಿಸಲು ಸಚ್ಚಿದಾನಂದಮೂರ್ತಿ ಯತ್ನಿಸಿದ್ದಾರೆ’ ಎಂದು ಕಾವ್ಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಟ ಚೇತನ್ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು: ‘ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣ ಸಮಾಜದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ನಟ ಚೇತನ್ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಸಮಾಜದ ಸ್ವಾಸ್ಥ್ಯ ಕದಡುವವರ ವಿರುದ್ಧ ಸರ್ಕಾರವು ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಅಖಿಲ ಹವ್ಯಕ ಮಹಾಸಭಾ ಆಗ್ರಹಿಸಿದೆ.
‘ಚೇತನ್ ಅವರು ಬ್ರಾಹ್ಮಣ ಸಮಾಜವನ್ನು ಭಯೋತ್ಪಾದಕರ ಜೊತೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಇದು ನಾಡಿನಲ್ಲಿ ಅಶಾಂತಿಗೆ ಕಾರಣವಾಗಬಹುದಾಗಿದ್ದು, ಅವರ ಹೇಳಿಕೆಗಳು ಖಂಡನೀಯ. ಪ್ರಚಾರಕ್ಕೋಸ್ಕರ ಸಮಾಜದಲ್ಲಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಹಾಗೂ ಸಮಾಜದ ಶಾಂತಿಯನ್ನು ಕದಡುವ ಹೇಳಿಕೆಗಳು ಶಿಕ್ಷಾರ್ಹ’ ಎಂದು ಮಹಾಸಭೆಯ ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ್ ಸಂಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.