ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರು ಬೇರೊಬ್ಬರ ಹೆಸರಿನಲ್ಲಿರುವ ಸಿಮ್ ಬಳಕೆ ಮಾಡುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
‘ಕೊಲೆ ಪ್ರಕರಣದ ಮೊದಲ ಆರೋಪಿಯಾಗಿರುವ ದರ್ಶನ್ ಆಪ್ತೆ ಪವಿತ್ರಾಗೌಡ, ಐದನೇ ಆರೋಪಿ ನಂದೀಶ್, 14ನೇ ಆರೋಪಿ ಪ್ರದೂಷ್, 15ನೇ ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ, 16ನೇ ಆರೋಪಿ ಕೇಶವಮೂರ್ತಿ ಹಾಗೂ 17ನೇ ಆರೋಪಿ ನಿಖಿಲ್ ನಾಯಕ್ ಅವರು ಕೂಡಾ ಬೇರೊಬ್ಬರ ಹೆಸರಿನಲ್ಲಿ ಪಡೆದಿರುವ ಸಿಮ್‌ಗಳನ್ನು ಬಳಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
‘ಆರೋಪಿಗಳು ಬಳಸುತ್ತಿರುವ ಸಿಮ್‌ಗಳು ಯಾರ ಹೆಸರಿನಲ್ಲಿವೆ ಎಂಬುದನ್ನು ಪತ್ತೆ ಹಚ್ಚಲಾಗಿದ್ದು, ಸಿಮ್ ಖರೀದಿದಾರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
‘ಪಟ್ಟಣಗೆರೆಯ ಜಯಣ್ಣ ಅವರ ಶೆಡ್‌ನಲ್ಲಿ ರೇಣುಕಸ್ವಾಮಿ ಅವರನ್ನು ಕೊಲೆ ಮಾಡಲಾಗಿತ್ತು. ಕಾರ್ತಿಕ್ ಅಲಿಯಾಸ್ ಕಪ್ಪೆ ಹಾಗೂ ನಿಖಿಲ್ ನಾಯಕ್ ಅವರು ರೇಣುಕಸ್ವಾಮಿ ಅವರ ಮೃತದೇಹವನ್ನು ಸುಮನಹಳ್ಳಿಯ ಸತ್ವ ಅಪಾರ್ಟ್‌ಮೆಂಟ್ ಮುಂಭಾಗದ ರಾಜಕಾಲುವೆಯ ಬಳಿ ಎಸೆದಿದ್ದರು. ನಂತರ ಅಲ್ಲಿಂದ ಆಟೊ ರಿಕ್ಷಾ ಮೂಲಕ ನಾಯಂಡಹಳ್ಳಿ ಸಿಗ್ನಲ್‌ವರೆಗೆ ಹೋಗಿದ್ದರು. ಆರೋಪಿಗಳು ತೆರಳಿದ್ದ ಆಟೊ ಚಾಲಕನನ್ನು ಈಗಾಗಲೇ ಪತ್ತೆ ಹಚ್ಚಿ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಗುರುತಿಸುವ ಪರೇಡ್ ನಡೆಸಲಾಗುವುದು. ಶೆಡ್‌ನಲ್ಲಿದ್ದ ಸಿಸಿಟಿವಿಯ ಡಿವಿಆರ್ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
‘ತನಿಖೆ ವೇಳೆ ದರ್ಶನ್ ಅವರ ಮನೆಯಲ್ಲಿ ₹70 ಲಕ್ಷ ನಗದು ಪತ್ತೆಯಾಗಿದ್ದು, ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇಷ್ಟೊಂದು ಹಣ ನಗದು ರೂಪದಲ್ಲಿ ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಯನ್ನು ಕೋರಲಾಗಿದೆ’ ಎಂದೂ ಉಲ್ಲೇಖಿಸಿದ್ದಾರೆ.
‘ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳಿಂದ ಪರಿಶೀಲಿಸಿ ವರದಿ ಪಡೆದುಕೊಳ್ಳಲಾಗುತ್ತಿದೆ. ವಾಹನಗಳ ಮೂಲ ಮಾಲೀಕರ ವಿವರಗಳನ್ನು ಪಡೆದುಕೊಂಡು ಅವರ ಹೇಳಿಕೆಗಳನ್ನು ಪಡೆದುಕೊಳ್ಳಲಾಗುವುದು. ಆರೋಪಿಗಳಿಗೆ ಸಂಬಂಧಿಸಿದ ಮೊಬೈಲ್‌ಗಳನ್ನು ‘ರಿಟ್ರೀವ್’ (ಮಾಹಿತಿಗಳ ಮರು ಸಂಗ್ರಹ) ಮಾಡಿಸಿ ವಿಧಿವಿಜ್ಞಾನ ಪ್ರಯೋಗಾಲಯದ ತನಿಖೆಗಾಗಿ ಹೈದರಾಬಾದ್‌ಗೆ ಕಳುಹಿಸಿದ್ದು, ಅದರ ವರದಿ ಪಡೆದುಕೊಳ್ಳಬೇಕಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಪ್ರಕರಣದಲ್ಲಿ ಇನ್ನೂ ಹಲವಾರು ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿದಾರರನ್ನು ವಿಚಾರಿಸಿ, ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆಗಳನ್ನು ಪಡೆದುಕೊಳ್ಳಬೇಕಾಗಿದೆ. ಪ್ರಕರಣವು ತನಿಖಾ ಹಂತದಲ್ಲಿ ಇರುವುದರಿಂದ ಆರೋಪಿಗಳಿಗೆ ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಆದ್ದರಿಂದ, ಆರೋಪಿಗಳಿಗೆ ಜಾಮೀನು ನೀಡಬಾರದು’ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.