ಬೆಂಗಳೂರು: ನಟಿ ತಮನ್ನಾ ಭಾಟಿಯಾ ಕುರಿತ ಪಠ್ಯ ಅಳವಡಿಸಿಕೊಂಡಿರುವ ಹೆಬ್ಬಾಳದ ಸಿಂಧಿ ಪ್ರೌಢಶಾಲೆ ವಿರುದ್ಧ ಪೋಷಕರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಶಾಲೆಯ 7ನೇ ತರಗತಿಯ ಮಕ್ಕಳಿಗೆ ಪರಿಚಯಿಸಿರುವ ಪಾಠವು ತಮನ್ನಾ, ನಟ ರಣವೀರ್ ಸಿಂಗ್ ಸೇರಿದಂತೆ ಪ್ರಮುಖ ಸಿಂಧಿಗಳ ಕುರಿತು ಮಾಹಿತಿ ಒಳಗೊಂಡಿದೆ. ಆದರೆ, ತಮನ್ನಾ ಅವರ ವಿಷಯಕ್ಕೆ ಮಾತ್ರ ವಿರೋಧ ವ್ಯಕ್ತವಾಗಿದೆ.
‘ಮಕ್ಕಳು ಈ ನಟಿಯ ಪಾಠ ಕೇಳಿದ ನಂತರ ಅಂತರ್ಜಾಲ ತಾಣದಲ್ಲಿ ಹೆಚ್ಚಿನ ಮಾಹಿತಿ ಹುಡುಕುತ್ತಾರೆ. ಅವರು ವಯಸ್ಸಿಗೆ ಸೂಕ್ತವಲ್ಲದ ವಿಷಯಗಳ ಕುರಿತು ಆಕರ್ಷಿತರಾಗುವ ಅಪಾಯವಿದೆ. ಹಾಗಾಗಿ, ತಮನ್ನಾ ಕುರಿತ ಪಾಠವನ್ನು ಕೈಬಿಡಲು ಒತ್ತಾಯಿಸಿದ್ದೇವೆ’ ಎಂದು ಪೋಷಕರು ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
‘7ನೇ ತರಗತಿಯ ಪಠ್ಯವು 1947ರಿಂದ 1962 ಅವಧಿಯ ಅಧ್ಯಾಯ, ಸಿಂಧ್ ವಿಭಜನೆಯ ನಂತರದ ಜೀವನ. ವಲಸೆ, ಸಮುದಾಯ ಮತ್ತು ಕಲಹ ವಿಷಯಗಳನ್ನು ಒಳಗೊಂಡಿದೆ. ಸಿಂಧ್ ಭಾಷಾ ಅಲ್ಪಸಂಖ್ಯಾತ ಸಮುದಾಯದ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಇಂತಹ ಪಾಠಗಳನ್ನು ಬಳಸಿಕೊಳ್ಳಲಾಗಿದೆ. ಯಾವುದೇ ಲೋಪವಾಗಿಲ್ಲ’ ಎಂದು ಶಾಲೆಯ ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.