ADVERTISEMENT

ಹುಟ್ಟಿನಿಂದ ಈವರೆಗೂ ನಾನು ಅಲೆಮಾರಿ: ನಟಿ ಉಮಾಶ್ರೀ

ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮನದಾಳ ಹಂಚಿಕೊಂಡ ನಟಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 15:44 IST
Last Updated 16 ನವೆಂಬರ್ 2024, 15:44 IST
<div class="paragraphs"><p>ಕಾರ್ಯಕ್ರಮದಲ್ಲಿ ಉಮಾಶ್ರೀ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಹಾಗೂ ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ ಸನ್ಮಾನಿಸಿದರು </p></div>

ಕಾರ್ಯಕ್ರಮದಲ್ಲಿ ಉಮಾಶ್ರೀ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಹಾಗೂ ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ ಸನ್ಮಾನಿಸಿದರು

   

- ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನನ್ನ ಜೀವನ ತೆರೆದ ಪುಸ್ತಕವಾಗಿದೆ. ಹುಟ್ಟಿನಿಂದ ಈವರೆಗೂ ನಾನೊಬ್ಬ ಅಲೆಮಾರಿಯಾಗಿದ್ದು, ಬದುಕಿನ ಹಾಗೂ ವೃತ್ತಿಯ ಪಯಣ ಒಂದೊಂದು ಕಡೆ ಸಾಗುತ್ತಿದೆ’ ಎಂದು ನಟಿ ಉಮಾಶ್ರೀ ಹೇಳಿದರು. 

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿದ ಅವರು, ಮನದಾಳವನ್ನು ಹಂಚಿಕೊಂಡರು. ‘ಏನೂ ಅಲ್ಲದ ನಾನು, ಏನೆಲ್ಲ ಆಗಿಹೋದೆ. ಇದು ನನಗೆ ವಿಸ್ಮಯ. ಉಮಾದೇವಿ ಆಗಿದ್ದ ನಾನು, ರಂಗಭೂಮಿ ಪ್ರವೇಶಿಸಿದ ಬಳಿಕ ಉಮಾಶ್ರೀಯಾದೆ. ಇದು ಬದುಕಿಗೆ ತಿರುವು ನೀಡಿತು. ಮನೆ ಎಂಬುದು ಹೆಸರಿಗೆ ಮಾತ್ರವಿದ್ದು, ಅಲ್ಲಿ ಇದ್ದದ್ದು ಬಹಳ ಕಡಿಮೆ. ಬದುಕು ಕಟ್ಟಿಕೊಟ್ಟ ಕಲಾ ಜಗತ್ತೇ ನನ್ನ ಮನೆಯಾಗಿದೆ’ ಎಂದರು. 

‘ಆಕಸ್ಮಿಕ ಹಾಗೂ ಅನಿವಾರ್ಯದಿಂದ ನಟಿಯಾದೆ. ಈ ಹಿಂದೆ ಕೆಲವು ಬಾರಿ ಜೀವನವನ್ನು ಮುಗಿಸಬೇಕು ಎಂದೂ ಅನಿಸಿದ್ದಿದೆ. ಆಗಿನ ಸಂದರ್ಭ, ಪರಿಸ್ಥಿತಿಯೇ ಆ ರೀತಿಯ ಆಲೋಚನೆಗೆ ಕಾರಣ. 1980–81ರ ಅವಧಿಯಲ್ಲಿ ಕುಡಿತವನ್ನೂ ಕಲಿತೆ. ಅಂದುಕೊಂಡ ಜೀವನ ಸಿಗಲಿಲ್ಲ, ಮುಂದೆ ದಾರಿಯಿಲ್ಲ ಎಂದು ಕುಡಿತ ಪ್ರಾರಂಭಿಸಿದೆ. ಆ ಅವಧಿಯಲ್ಲಿ ಮಗಳು ಕೇಳಿದ ಪ್ರಶ್ನೆಗಳಿಂದಾಗಿ ಬದುಕನ್ನು ಜಯಸಿಬೇಕು ಅನಿಸಿ, ಕುಡಿತ ಬಿಟ್ಟೆ. ರಂಗಭೂಮಿಗೆ ಬರುವ ಮೊದಲು ಕೂಲಿ ಕೆಲಸ, ಕೋಡುಬಳೆ ಮಾರಾಟ ಸೇರಿ ವಿವಿಧ ಕೆಲಸಗಳನ್ನು ಮಾಡಿದ್ದೆ. ಜೀವನ ನಿರ್ವಹಣೆ ಕಷ್ಟಸಾಧ್ಯವಾದ ಸಂದರ್ಭದಲ್ಲಿ ರಂಗಭೂಮಿ ಕೈ ಹಿಡಿಯಿತು’ ಎಂದು ಸ್ಮರಿಸಿಕೊಂಡರು. 

ಅಭಿನಯ ಮತ್ತು ರಾಜಕೀಯದಲ್ಲಿ ಯಾವುದು ಇಷ್ಟ ಎಂಬ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು, ‘ಜನರಿಗಾಗಿ ನಟನೆ ಮಾಡಿ ಮನೋರಂಜನೆ ನೀಡಿದರೆ, ರಾಜಕೀಯದಲ್ಲಿ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ, ಎರಡೂ ಕ್ಷೇತ್ರ ಇಷ್ಟ’ ಎಂದು ಹೇಳಿದರು. ಈ ನಡುವೆ ತಮ್ಮ ಜೀವನದ ಕೆಲ ಘಟನೆಗಳನ್ನು ವಿವರಿಸುವಾಗ ಅವರು ಭಾವುಕರಾದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಉಪಸ್ಥಿತರಿದ್ದರು. 

‘ಎಲ್ಲ ಇಲಾಖೆಗೂ ಸಮರ್ಥರು’
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನು ಮಹಿಳೆಯರಿಗೇ ಏಕೆ ನೀಡುತ್ತಾರೆ ಎಂಬ ಸಭಿಕರ ಪ್ರಶ್ನೆಗೆ ಉತ್ತರಿಸಿದ ಉಮಾಶ್ರೀ ‘ಮಹಿಳೆಯರು ಎಲ್ಲ ಖಾತೆಗಳನ್ನು ನಿಭಾಯಿಸಲು ಸಮರ್ಥರಿದ್ದಾರೆ. ಸ್ತ್ರೀಯರು ಈ ಖಾತೆಯನ್ನು ನಿಭಾಯಿಸಿದರೆ ಇಲಾಖೆಗೆ ಹೆಚ್ಚು ಶಕ್ತಿ ಬರುತ್ತದೆ ಎಂಬ ಕಾರಣಕ್ಕೆ ಮಹಿಳೆಯರಿಗೆ ನೀಡಲಾಗುತ್ತದೆ’ ಎಂದರು.  ಅನ್ಯ ಭಾಷೆಗಳ ಚಿತ್ರರಂಗದಲ್ಲಿ ಅವಕಾಶಗಳ ಬಗೆಗಿನ ಪ್ರಶ್ನೆಗೆ ‘ಅನ್ಯ ಭಾಷೆಗಳಲ್ಲಿ ಅವಕಾಶಗಳು ಮೊದಲು ಅಷ್ಟಾಗಿ ಬರಲಿಲ್ಲ. ಆಮೇಲೆ ಬಂದರೂ ಕನ್ನಡ ನನಗೆ ಏನನ್ನು ಕಡಿಮೆ ಮಾಡಿಲ್ಲ ಎಂದು ಆಸಕ್ತಿ ತೋರಿಸಲಿಲ್ಲ’ ಎಂದು ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.