ADVERTISEMENT

ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 6 ಸಾವಿರ ಅತಿಸಾರ ಪ್ರಕರಣ

ಈ ವರ್ಷ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 87 ಸಾವಿರಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 16:09 IST
Last Updated 22 ಜೂನ್ 2024, 16:09 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ರಾಜ್ಯದಲ್ಲಿ ಅತಿಸಾರ (ಡಯೇರಿಯಾ) ಪ್ರಕರಣಗಳು ಏರಿಕೆಯಾಗಿವೆ. ಕಳೆದೊಂದು ವಾರದಲ್ಲಿ 6,060 ಪ್ರಕರಣಗಳು ದೃಢಪಟ್ಟಿವೆ.

ಆರೋಗ್ಯ ಇಲಾಖೆಯು ಸೋಂಕು ರೋಗಗಳ ವರದಿ ಬಿಡುಗಡೆ ಮಾಡಿದ್ದು, ಇದರ ಪ‍್ರಕಾರ ಈ ವರ್ಷ ಜೂನ್ 16ರ ವೇಳೆಗೆ ವರದಿಯಾದ ಒಟ್ಟು ಅತಿಸಾರ ಪ್ರಕರಣಗಳ ಸಂಖ್ಯೆ 87,697ಕ್ಕೆ ಏರಿಕೆಯಾಗಿದೆ.

ADVERTISEMENT

ಎರಡೂವರೆ ತಿಂಗಳಿಂದ ಪ್ರಕರಣಗಳು ಹೆಚ್ಚಳವಾಗಿವೆ. ಮಾರ್ಚ್ ಅಂತ್ಯಕ್ಕೆ 36,814 ಅತಿಸಾರ ಪ್ರಕರಣಗಳು ವರದಿಯಾಗಿದ್ದವು. ಬಳಿಕ ಬಿಸಿಲು ಮಳೆಯ ವಾತಾವರಣದಿಂದಾಗಿ ಪ್ರಕರಣಗಳು ಏರುಗತಿ ಪಡೆದು, 50 ಸಾವಿರಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ. 

ನಾಯಿ ಹಾಗೂ ಹಾವು ಕಡಿತ ಪ್ರಕರಣಗಳೂ ಏರಿಕೆ ಕಂಡಿವೆ. ಕಳೆದೊಂದು ವಾರದಲ್ಲಿ 7,066 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 1.56 ಲಕ್ಷಕ್ಕೆ ತಲುಪಿದೆ. ವಾರದಲ್ಲಿ 408 ಹಾವು ಕಡಿತ ಪ್ರಕರಣ ವರದಿಯಾಗಿದೆ. ಈವರೆಗೆ ವರದಿಯಾದ ಒಟ್ಟು ಹಾವು ಕಡಿತ ಪ್ರಕರಣಗಳು 4,710ಕ್ಕೆ ಏರಿಕೆಯಾಗಿದೆ. 27 ಮಂದಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ.

ಪ್ರಾಣಿಗಳ ಮೂಲಕ ಹರಡುವ ಬ್ಯಾಕ್ಟೀರಿಯಾ ಸೋಂಕು (ಲೆಪ್ಟೊಸ್ಪಿರೋಸಿಸ್) ವಾರದಲ್ಲಿ 57 ಮಂದಿಗೆ ದೃಢಪಟ್ಟಿದೆ. ಈವರೆಗೆ ಒಟ್ಟು 587 ಮಂದಿ ಸೋಂಕಿತರಾಗಿದ್ದಾರೆ. ಮಂಗನ ಕಾಯಿಲೆಯೂ (ಕೆಎಫ್‌ಡಿ) ವಾರದಲ್ಲಿ ಮೂರು ಮಂದಿಯಲ್ಲಿ ಖಚಿತಪಟ್ಟಿದೆ. ಒಟ್ಟು ಕೆಎಫ್‌ಡಿ ಪ್ರಕರಣಗಳ ಸಂಖ್ಯೆ 355ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.