ಬೆಂಗಳೂರು: ಕೃಷಿ ಉದ್ದೇಶಕ್ಕೆ ಅಧಿಕವಾಗಿ ಬಳಕೆ ಮಾಡುತ್ತಿರುವ ಕಾವೇರಿ ನೀರನ್ನು ಕಡಿತಗೊಳಿಸಿ, ಬೆಂಗಳೂರು ನಗರಕ್ಕೆ 10 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಪೂರೈಸಲು ಸರ್ಕಾರ ನಿರ್ಧರಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ‍್ತಿಗೆ ಸೇರಿರುವ 110 ಹಳ್ಳಿಗಳೂ ಸೇರಿದಂತೆ ನಗರದ ಹೊಸ ಬಡಾವಣೆ ಹಾಗೂ ಪ್ರದೇಶಗಳಿಗೆ ಹೆಚ್ಚಿನ ನೀರಿನ ಅಗತ್ಯವಿದೆ. ಹೀಗಾಗಿ, ಹೆಚ್ಚುವರಿ ನೀರನ್ನು ಹಂಚಿಕೆ ಮಾಡಬೇಕು ಎಂದು ಬೆಂಗಳೂರು ಜಲಮಂಡಳಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಸರ್ಕಾರ, ಹೆಚ್ಚುವರಿ ನೀರು ಪೂರೈಸುವ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಿ ವರದಿ ನೀಡಲು ಕಾವೇರಿ ನೀರಾವರಿ ನಿಗಮಕ್ಕೆ ಸೂಚಿತ್ತು.
ತಾಂತ್ರಿಕ ತಜ್ಞರ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ, ‘ಭತ್ತ, ಕಬ್ಬು ಹಾಗೂ ಇತರೆ ಕೃಷಿ ಬೆಳೆಗಳಿಗೆ ಅಗತ್ಯಕ್ಕಿಂತ ಅತಿ ಹೆಚ್ಚು ನೀರು ಬಳಸಲಾಗುತ್ತಿದೆ. ಇದನ್ನು ಕಡಿಮೆ ಮಾಡಿದರೆ ಬೆಂಗಳೂರಿಗೆ ಹೆಚ್ಚಿನ ನೀರು ಒದಗಿಸಬಹುದು’ ಎಂದು ವರದಿ ನೀಡಿದೆ. ಈ ವರದಿ ಆಧರಿಸಿ ಜಲಮಂಡಳಿಗೆ ತಾತ್ವಿಕ ಒಪ್ಪಿಗೆ ನೀಡಿರುವ ಸರ್ಕಾರ, ಹೆಚ್ಚುವರಿ ನೀರಿನ ಬಳಕೆಗೆ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಸೂಚಿಸಿದೆ.
‘ಬೆಂಗಳೂರಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆ ಅಂತಿಮ ಹಂತದಲ್ಲಿದ್ದು, 110 ಹಳ್ಳಿಗಳಿಗೆ ಏಪ್ರಿಲ್‌ನಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಸಲು ಯೋಜಿಸಲಾಗಿದೆ. ಇದೇ ಸಂದರ್ಭದಲ್ಲೇ ಹೆಚ್ಚುವರಿ 10 ಟಿಎಂಸಿ ಅಡಿ ನೀರನ್ನು ಸಂಗ್ರಹಿಸುವ ಹಾಗೂ ಪೂರೈಸುವ ಸಾಮರ್ಥ್ಯ ವೃದ್ಧಿಸುವ ಕಾಮಗಾರಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದರು.
‘ಜಲಮಂಡಳಿಯು ವಾರ್ಷಿಕವಾಗಿ ಕಾವೇರಿ ನದಿಯಿಂದ 24 ಟಿಎಂಸಿ ಅಡಿ ನೀರನ್ನು ಬಳಸಿದರೆ, ಅದರಲ್ಲಿ ಶೇ 20ರಷ್ಟನ್ನು ‘ಕನ್ಸಂಟೀವ್ ಯೂಸ್’ ಎಂದು ವರ್ಗೀಕರಿಸಲಾಗುತ್ತದೆ. ಅಂದರೆ, ನದಿಯಿಂದ ಪಡೆದುಕೊಂಡ ನೀರನ್ನು ಬಳಸಿ, ಅದರಲ್ಲಿ ಶೇ 20ರಷ್ಟನ್ನು ನದಿಗೇ ವಾಪಸ್ ಹರಿಸಿದರೆ, ಆ ಪ್ರಮಾಣದ ನೀರನ್ನು ಹೆಚ್ಚುವರಿಯಾಗಿ ಪಡೆಯುವ ಅವಕಾಶ ಇರುತ್ತದೆ. ಈ ಆಧಾರದಲ್ಲಿ ಹೆಚ್ಚಿನ ನೀರಿನ ಬೇಡಿಕೆಯನ್ನು ಸರ್ಕಾರ ಒಪ್ಪಿದೆ. ನಗರದಲ್ಲಿ ಬಳಕೆಯಾದ ಬಹುತೇಕ ನೀರು ವೃಷಭಾವತಿ, ಅರ್ಕಾವತಿ ಹಾಗೂ ಕಾಲುವೆ– ಕಣಿವೆಗಳ ಮೂಲಕ ಕಾವೇರಿ ನದಿಯನ್ನೇ ಸೇರಿಕೊಳ್ಳುತ್ತಿದೆ’ ಎಂದು ಅಧಿಕಾರಿಗಳು ವಿವರ ನೀಡಿದರು.
ತಾತ್ವಿಕ ಒಪ್ಪಿಗೆ: ರಾಮ್‌ಪ್ರಸಾತ್
‘ನಗರದ ಜನಸಂಖ್ಯೆ ಹೆಚ್ಚಳ ಹಾಗೂ ಪ್ರದೇಶಗಳ ಅಭಿವೃದ್ಧಿಯಿಂದ ನೀರಿನ ಹಂಚಿಕೆ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಹೆಚ್ವುವರಿಯಾಗಿ 10 ಟಿಎಂಸಿ ಅಡಿ ನೀರನ್ನು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಉಳಿಸಿ ನೀಡುವುದಾಗಿ ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.