ಬೆಂಗಳೂರು: ದೇವಸ್ಥಾನಗಳಿಗೆ ಬರುವವರು ಸಭ್ಯ ಉಡುಪು ಧರಿಸಬೇಕು ಎಂಬ ನಿಯಮವನ್ನು ಎಲ್ಲ ಖಾಸಗಿ ದೇವಸ್ಥಾನಗಳಲ್ಲಿ ಜಾರಿ ಮಾಡುವ ಅಭಿಯಾನವನ್ನು ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆರಂಭಿಸಿದೆ.
ಬೆಂಗಳೂರಿನ 54 ದೇವಸ್ಥಾನಗಳು ಸೇರಿದಂತೆ ರಾಜ್ಯದ 500 ದೇವಸ್ಥಾನಗಳಲ್ಲಿ ಈ ಬಗ್ಗೆ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ವಸಂತನಗರದ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಫಲಕ ಅಳವಡಿಸುವ ಮೂಲಕ ಈ ಅಭಿಯಾನ ಆರಂಭಿಸಲಾಗಿದೆ ಎಂದು ಮಹಾಸಂಘದ ಸಂಚಾಲಕ ಮೋಹನ್ ಗೌಡ ತಿಳಿಸಿದ್ದಾರೆ.
ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಕೂಡ ಸಭ್ಯ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
‘ಬೆಂಗಳೂರಿನಲ್ಲಿ ಶೇ 99ರಷ್ಟು ಭಕ್ತರು ಸಭ್ಯ ಉಡುಗೆಯಲ್ಲಿಯೇ ಬರುತ್ತಾರೆ. ಎಲ್ಲರ ದೃಷ್ಟಿ, ಮನಸ್ಸು ದೇವರ ಮೇಲೆಯೇ ಇರಬೇಕು ಎಂಬ ಕಾರಣಕ್ಕೆ ಎಲ್ಲರೂ ಸಭ್ಯ ಉಡುಗೆಯನ್ನೇ ಧರಿಸಿ ದೇವಸ್ಥಾನಕ್ಕೆ ಬರಲಿ. ತುಂಡು ಉಡುಗೆ ಬೇಡ ಎಂಬುದು ನನ್ನ ಮನಸ್ಸಲ್ಲೂ ಇದೆ. ಎಲ್ಲ ಭಕ್ತರ ಅಭಿಪ್ರಾಯವೂ ಅದುವೇ ಆಗಿದೆ. ಅದರ ಬಗ್ಗೆ ಫಲಕವನ್ನು ದೇವಸ್ಥಾನದಲ್ಲಿ ಅಳವಡಿಸಲು ತಯಾರಿ ನಡೆಸಿದ್ದೇವೆ’ ಎಂದು ರಾಜಾಜಿನಗರ ವಾಸವಿ ದೇವಸ್ಥಾನದ ಧರ್ಮದರ್ಶಿ ಎ.ಎಸ್.ಎನ್. ಗುಪ್ತ ಪ್ರತಿಕ್ರಿಯಿಸಿದರು.
‘ನಮ್ಮಲ್ಲಿ ಅಧಿಕೃತವಾಗಿ ವಸ್ತ್ರಸಂಹಿತೆ ಜಾರಿಯಲ್ಲಿ ಇಲ್ಲದೇ ಇದ್ದರೂ ಎಲ್ಲರೂ ಸಭ್ಯ ಉಡುಪು ಧರಿಸಿಯೇ ಬರುತ್ತಾರೆ. ಸರ್ಕಾರದಿಂದ ಅಧಿಕೃತ ಆದೇಶ ಬಂದರೆ ನಿಯಮ ಪಾಲಿಸುತ್ತೇವೆ’ ಎಂದು ಆನೆಗುಡ್ಡೆ ವಿನಾಯಕ ದೇವಸ್ಥಾನದ ವ್ಯವಸ್ಥಾಪಕ ನಟೇಶ್ ಕಾರಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಏನೆಲ್ಲ ಧರಿಸಬಹುದು
ಮಹಿಳೆಯರು ಚೂಡಿದಾರ, ಲಂಗ-ದಾವಣಿ, ಸಲ್ವಾರ್-ಕುರ್ತಾ, ಸೀರೆ, ಪುರುಷರು ಕುರ್ತಾ, ಧೋತಿ, ಪಂಚೆ, ಪೈಜಾಮ ಅಥವಾ ಸಾಮಾನ್ಯ ಶರ್ಟ್-ಪ್ಯಾಂಟ್‌ಗಳನ್ನು ಧರಿಸಬಹುದು.
ಯಾವುದು ಬೇಡ
ಪಾಶ್ಚಿಮಾತ್ಯ ಉಡುಪುಗಳಲ್ಲಿ ಸ್ಕರ್ಟ್, ಮಿಡಿ, ಶಾರ್ಟ್ ಪ್ಯಾಂಟ್, ಸ್ಯಾಂಡೋ ವೆಸ್ಟ್, ಜೀನ್ಸ್, ಸ್ಕರ್ಟ್, ಸ್ಲೀವ್‌ಲೆಸ್ ಡ್ರೆಸ್, ನೈಟ್ ಡ್ರೆಸ್ ಹಾಗೂ ಯಾವುದೇ ತುಂಡು ಉಡುಗೆಗಳನ್ನು ಧರಿಸಿ ಬರುವಂತಿಲ್ಲ.
ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಇರುವ ಪದ್ಧತಿಯನ್ನೇ ಮುಂದುವರಿಸಲಾಗುವುದು. ಹೊಸ ವಸ್ತ್ರ ನಿಯಮ ಜಾರಿ ಮಾಡುವ ಅಗತ್ಯ ಇಲ್ಲ.ರಾಮಲಿಂಗಾರೆಡ್ಡಿ, ಮುಜರಾಯಿ ಇಲಾಖೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.