ADVERTISEMENT

ಉತ್ಸವದಲ್ಲಿ ಆದಿಶಂಕರರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 20:23 IST
Last Updated 28 ಅಕ್ಟೋಬರ್ 2018, 20:23 IST
ಮಾಜಿ ರಾಯಭಾರಿ, ಜೆಡಿಯು ಮುಖಂಡ ಪವನ್ ಕೆ. ವರ್ಮಾ ಅವರು ‘ಆದಿ ಶಂಕರಾಚಾರ್ಯ’ವಿಚಾರದ ಬಗ್ಗೆ ಮಾತನಾಡಿದರು. ಶೋಮಾ ಚೌಧರಿ ಇದ್ದಾರೆ
ಮಾಜಿ ರಾಯಭಾರಿ, ಜೆಡಿಯು ಮುಖಂಡ ಪವನ್ ಕೆ. ವರ್ಮಾ ಅವರು ‘ಆದಿ ಶಂಕರಾಚಾರ್ಯ’ವಿಚಾರದ ಬಗ್ಗೆ ಮಾತನಾಡಿದರು. ಶೋಮಾ ಚೌಧರಿ ಇದ್ದಾರೆ   

ಬೆಂಗಳೂರು: ಬ್ರಹ್ಮನ್‌ ಎಂದರೆ ಏನು? ಆತ್ಮಕ್ಕೂ ಬ್ರಹ್ಮಕ್ಕೂ ಇರುವ ಸಂಬಂಧವೇನು? ಬ್ರಹ್ಮಾಂಡದಲ್ಲಿ ವ್ಯಕ್ತಿಯ ಪಾತ್ರವೇನು? ಆದಿ ಶಂಕರರು ಯಾರು ಹಿಂದೂ(ಸನಾತನ) ಧರ್ಮಕ್ಕೆ ಅವರ ಕೊಡುಗೆ ಏನು?

ಬೆಂಗಳೂರಿನ ಲಲಿತ್‌ ಅಶೋಕ್‌ ಹೊಟೇಲಿನ ಈಜುಕೊಳದ ಪಕ್ಕದ ವೇದಿಕೆಯಲ್ಲಿ ಇಂತಹ ಪ್ರಶ್ನೆಗಳು ಕೇಳಿ ಬಂದವು. ಅಲ್ಲಿದ್ದ ಸಭಿಕರು ತತ್ವಜ್ಞಾನದ ಜಿಜ್ಞಾಸುಗಳಾಗಿರಲಿಲ್ಲ. ಆಧುನಿಕ ಸಾಹಿತ್ಯ ಪ್ರೇಮಿಗಳಾಗಿದ್ದರು.

ಆದಿ ಶಂಕರರ ಕುರಿತು ಚಿಂತನೆ ನಡೆದದ್ದು ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ.‘ಅದ್ವೈತ’ ಮತ್ತು ಅದನ್ನು ಪ್ರತಿಪಾದಿಸಿದ ಆದಿಶಂಕರರನ್ನು ಆಧುನಿಕ ಸಭಿಕರಿಗೆ ಪರಿಚಯ ಮಾಡಿದವರು ರಾಜಕಾರಣಿ ಹಾಗೂ ನಿವೃತ್ತ ರಾಯಭಾರಿ ಪವನ್ ವರ್ಮಾ.

ADVERTISEMENT

ಉಪನಿಷತ್ತಿನ ಕಾಲದ ಋಷಿಗಳಿರಲಿ, ಶಂಕರರಾಗಲಿ ದೇವರ ಬಗ್ಗೆ ಮಾತನಾಡಲಿಲ್ಲ. ವಿಶ್ವ ಚೈತನ್ಯಕ್ಕೂ ಮಾನವನಿಗೂ ಇರುವ ಸಂಬಂಧದ ಬಗ್ಗೆ ಚಿಂತಿಸಿದರು. ಪ್ರಶ್ನೋತ್ತರ, ಸಂವಾದದ ಮೂಲಕ ಅಂತಿಮ ಸತ್ಯದ ರಹಸ್ಯವನ್ನು ಅನಾವರಣಗೊಳಿಸುತ್ತಾ ಹೋದರು. ಈ ಕುರಿತ ಚರ್ಚೆ ನಡೆಸಲೆಂದೇ ಆಗಿನ ಕಾಲದಲ್ಲಿ ದೇಶದ ಹಲವು ಕಡೆಗಳಲ್ಲಿ ಶಾಸ್ತ್ರಾರ್ಥಗಳನ್ನು ನಡೆಸುತ್ತಿದ್ದರು ಎಂದು ಅವರು ಹೇಳಿದರು.

ಶಂಕರರು ಪ್ರತಿಪಾದಿಸಿದ ತತ್ವಗಳಿಗೂ ವಿಜ್ಞಾನಕ್ಕೂ ಸಂಬಂಧವಿದೆ. ಅವರ ತತ್ವಗಳು ಕ್ರಾಂತಿಕಾರಕವಾಗಿದ್ದವು. ಆಧುನಿಕ ಭೌತವಿಜ್ಞಾನ, ಕ್ವಾಂಟಂ ಫಿಸಿಕ್ಸ್‌, ಮೆಟಾ ಫಿಸಿಕ್ಸ್‌ ಕೂಡ ಉಪನಿಷತ್ತುಗಳು ಪ್ರತಿಪಾದಿಸಿದ ಸತ್ಯದತ್ತಲೇ ಮುಖ ಮಾಡಿವೆ ಎಂದರು.

ಆದಿ ಶಂಕರರು ಹಿಂದೂ ಧರ್ಮದ ಅತಿ ದೊಡ್ಡ ಚಿಂತಕ, ತತ್ವಜ್ಞಾನಿ. ಉಪನಿಷತ್ತಿನ ವಿಚಾರಧಾರೆಗಳ ಮೂಲಕ ಹಿಂದೂ ಧರ್ಮದ ಪುನರುತ್ಥಾನ ಮಾಡಿದ ಮಹಾಪುರುಷ. ದೇಶದ ನಾಲ್ಕು ಕಡೆ ಮಠಗಳ ಸ್ಥಾಪನೆಯ ಮೂಲಕ ಭಾರತಕ್ಕೊಂದು ನಾಗರಿಕತೆಯ ಗಡಿಯನ್ನು ಹಾಕಿಕೊಟ್ಟರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಮೂರು ಬಾರಿ ದೇಶದಲ್ಲಿ ಸಂಚರಿಸಿ ಅದ್ವೈತದ ವಿಚಾರವನ್ನು ಪ್ರಸಾರ ಮಾಡಿದರು ಎಂದು ಪವನ್‌ ವರ್ಮಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.