ADVERTISEMENT

ವಿವಾಹ ಪ್ರಮಾಣ ಪತ್ರ ವಿಚಾರಣೆ ಮುಂದೂಡಿಕೆ

ಕಾನೂನು ಎಲ್ಲಿದೆ: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 22:19 IST
Last Updated 15 ನವೆಂಬರ್ 2024, 22:19 IST
<div class="paragraphs"><p>ಹೈಕೋರ್ಟ್‌&nbsp;</p></div>

ಹೈಕೋರ್ಟ್‌ 

   

ಬೆಂಗಳೂರು: ‘ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಮುಖಾಂತರ ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಅಧಿಕಾರದ ಬಗ್ಗೆ ಎಲ್ಲೂ ಕೇಳಿಲ್ಲವಲ್ಲ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌,‘ಯಾವ ಕಾನೂನಿನ ಅಧಿಕಾರವನ್ನು ಬಳಸಿ ಇಂತಹ ಆದೇಶ ಹೊರಡಿಸಲಾಗಿದೆ ಎಂಬ ಬಗ್ಗೆ ಉತ್ತರಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ವಕ್ಫ್‌ ಮಂಡಳಿಗಳಿಗೆ ಮುಸ್ಲಿಂ ವಿವಾಹಗಳನ್ನು ಕಡ್ಡಾಯವಾಗಿ ನೋಂದಾಯಿಸುವ ಯಾವುದೇ ಶಾಸನಾ
ತ್ಮಕ ಅಧಿಕಾರ ಇಲ್ಲ’ ಎಂದು ಆಕ್ಷೇಪಿಸಿ ಆಲಂ ಪಾಷ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.‌

ADVERTISEMENT

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು. ಆದರೆ, ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿತು. ಅಂತೆಯೇ, ‘ಮುಂದಿನ ವಿಚಾರಣೆ ವೇಳೆಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಬೇಕು’ ಎಂದು ತಾಕೀತು ಮಾಡಿತು.

‘ಮುಸ್ಲಿಂ ಮದುವೆಗಳ ನೋಂದಣಿ ಪ್ರಮಾಣ ಪತ್ರವನ್ನು ವಿತರಿಸುವಂತಹ ಅಧಿಕಾರವನ್ನು ವಕ್ಫ್‌ ಮಂಡಳಿಗೆ ನೀಡಬಹುದು ಎಂಬುದಕ್ಕೆ ವಕ್ಫ್‌ ಕಾಯ್ದೆ-1995ರ ಯಾವ ಕಲಂನಲ್ಲಿ ಅವಕಾಶ ನೀಡಲಾಗಿದೆ ಎಂಬುದನ್ನು ವಿಶದಪಡಿಸಿ’ ಎಂದು ಮೌಖಿಕವಾಗಿ ನಿರ್ದೇಶಿಸಿತು.

ಕೋರಿಕೆ: ‘ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್‌ ಮತ್ತು ಹಜ್‌ ಇಲಾಖೆ 2023ರ ಸೆಪ್ಟೆಂಬರ್ 30
ರಂದು ಆದೇಶವೊಂದನ್ನು ಹೊರಡಿಸಿದೆ. ಇದರನ್ವಯ ಮುಸ್ಲಿಂ ಸಮುದಾಯದ ವಿವಾಹ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸುವ ಅಧಿಕಾರವನ್ನು ವಕ್ಫ್‌ ಮಂಡಳಿಗೆ ನೀಡಲಾಗಿದೆ. ಇದು ವಕ್ಫ್‌
ಕಾಯ್ದೆ-1995ರ ನಿಯಮಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಸರ್ಕಾರದ ಈ ಆದೇಶವನ್ನು ರದ್ದುಗೊಳಿಸಬೇಕು. ಈ ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.