ADVERTISEMENT

ಮಸಾಜ್ ನೆಪ: ತೃತೀಯ ಲಿಂಗಿ ಪ್ರಜ್ಞೆ ತಪ್ಪಿಸಿ ಕಳ್ಳತನ

ಸಿನಿಮೀಯ ರೀತಿಯಲ್ಲಿ ಕೃತ್ಯ: ಇಬ್ಬರು ಬಂಧನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 0:15 IST
Last Updated 27 ಡಿಸೆಂಬರ್ 2022, 0:15 IST
ಶಮೀರ್
ಶಮೀರ್   

ಬೆಂಗಳೂರು: ಮಸಾಜ್‌ ಮಾಡಿಸಿಕೊಳ್ಳುವ ನೆಪದಲ್ಲಿ ತೃತೀಯ ಲಿಂಗಿಯೊಬ್ಬರ ಮನೆಗೆ ಹೋಗಿ ಪ್ರಜ್ಞೆ ತಪ್ಪಿಸಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪುದುಚೇರಿಯ ಶಿವ ಅಲಿಯಾಸ್ ಜೇಮ್ಸ್ (33) ಹಾಗೂ ಈಜಿಪುರದ ಶಮೀರ್ (32) ಬಂಧಿತರು. ತೃತೀಯ ಲಿಂಗಿಯೊಬ್ಬರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ₹ 2 ಲಕ್ಷ ನಗದು ಹಾಗೂ 30 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿರುವ ತೃತೀಯ ಲಿಂಗಿ, ಮಸಾಜ್ ಪಾರ್ಲರ್ ನಡೆಸುತ್ತಿದ್ದಾರೆ. ಆರೋಪಿ ಶಿವ, ಮಸಾಜ್ ಮಾಡಿಸುವುದಕ್ಕಾಗಿ ಪಾರ್ಲರ್‌ಗೆ ಆಗಾಗ ಹೋಗಿ ಬರುತ್ತಿದ್ದ. ಮಸಾಜ್‌ ಮಾಡಿಸುವುದಕ್ಕಾಗಿ ಆರೋಪಿ, ಸ್ನೇಹಿತರ ಬಳಿ ಸಾಲ ಸಹ ಮಾಡಿಕೊಂಡಿದ್ದ’ ಎಂದು ತಿಳಿಸಿದರು.

ADVERTISEMENT

₹20 ಲಕ್ಷ ಜಮೆ ಸಂದೇಶ ನೋಡಿ ಸಂಚು: ‘ಆರೋಪಿ ಶಿವ ಇತ್ತೀಚೆಗೆ ತೃತೀಯ ಲಿಂಗಿ ಮನೆಗೆ ಹೋಗಿದ್ದ. ಮಸಾಜ್‌ ಸಂದರ್ಭದಲ್ಲಿ ತೃತೀಯ ಲಿಂಗಿ ಮೊಬೈಲ್‌ ಸಂದೇಶ ಬಂದಿತ್ತು. ₹ 20 ಲಕ್ಷ ಖಾತೆಗೆ ಜಮೆಯಾದ ಮಾಹಿತಿ ಸಂದೇಶದಲ್ಲಿತ್ತು. ಅದನ್ನು ನೋಡಿದ್ದ ಶಿವ, ತೃತೀಯ ಲಿಂಗಿ ಮನೆಯಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಮಸಾಜ್ ನಂತರ ಮನೆಯಿಂದ ಹೊರಬಂದಿದ್ದ ಶಿವ, ಸ್ನೇಹಿತ ಶಮೀರ್‌ಗೆ ಕರೆ ಮಾಡಿ ಕಳ್ಳತನದ ಸಂಚು ವಿವರಿಸಿದ್ದ. ಇಬ್ಬರೂ ಸೇರಿ ಕಳ್ಳತನ ಮಾಡಲು ಸಿದ್ಧವಾಗಿದ್ದರು’ ಎಂದು ತಿಳಿಸಿದರು.

ಪ್ರಜ್ಞೆ ತಪ್ಪಿಸಿ ಕೃತ್ಯ: ‘ಗ್ರಾಹಕನ ಸೋಗಿನಲ್ಲಿ ಶಮೀರ್ ಒಬ್ಬನೇ ತೃತೀಯ ಲಿಂಗಿ ಮನೆಗೆ ಹೋಗಿದ್ದ. ಮಸಾಜ್ ಮಾಡಿಸಿಕೊಂಡ ನಂತರ, ಉಡುಗೊರೆಯೆಂದು ಪಾನೀಯ ನೀಡಿದ್ದ. ಅದನ್ನು ಕುಡಿಯುತ್ತಿದ್ದಂತೆ ತೃತೀಯ ಲಿಂಗಿ, ಪ್ರಜ್ಞೆ ತಪ್ಪಿ ಬಿದ್ದಿದ್ದರು’ ಎಂದು ಪೊಲೀಸರು ಹೇಳಿದರು.

‘ಡೆಬಿಟ್‌ ಕಾರ್ಡ್‌ಗಳ ಮೇಲೆಯೇ ತೃತೀಯ ಲಿಂಗಿ, ಪಾಸ್‌ವರ್ಡ್‌ಗಳನ್ನು ಬರೆದಿದ್ದರು. ಆರೋಪಿ ಶಿವ, ಕಾರ್ಡ್‌ಗಳನ್ನು ತೆಗೆದುಕೊಂಡು ಎಟಿಎಂ ಘಟಕಕ್ಕೆ ಹೋಗಿ ಹಣ ಡ್ರಾ ಮಾಡಿದ್ದ. ಮನೆಯಲ್ಲೇ ಇದ್ದ ಶಮೀರ್, ತೃತೀಯ ಲಿಂಗಿ ಮೊಬೈಲ್‌ಗೆ ಬರುತ್ತಿದ್ದ ಸಂದೇಶಗಳನ್ನು ಅಳಿಸಿ ಹಾಕುತ್ತಿದ್ದ. ಇದೇ ರೀತಿಯಲ್ಲೇ ಆರೋಪಿಗಳು ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಡ್ರಾ ಮಾಡಿಕೊಂಡಿದ್ದರು’ ಎಂದು ತಿಳಿಸಿದರು.

‘ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಕದ್ದುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಕೆಲ ಹೊತ್ತಿನ ನಂತರ ಎಚ್ಚರಗೊಂಡಿದ್ದ ತೃತೀಯ ಲಿಂಗಿ, ಕಳ್ಳತನ ನಡೆದಿದ್ದನ್ನು ಗಮನಿಸಿ ಠಾಣೆಗೆ ದೂರು ನೀಡಿದ್ದರು. ಶಮೀರ್‌ ಮೇಲೆಯೇ ಅವರು ಅನುಮಾನ ವ್ಯಕ್ತಪಡಿಸಿದ್ದರು’ ಎಂದು ಹೇಳಿದರು.

‘ಹಣ, ಚಿನ್ನಾಭರಣ ಸಮೇತ ತಮಿಳುನಾಡಿಗೆ ಹೋಗಿದ್ದ ಆರೋಪಿಗಳು, ಕೆಲ ದಿನ ಮೋಜು–ಮಸ್ತಿ ಮಾಡಿದ್ದರು. ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದರು. ಇದೇ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದಾಗ, ತಪ್ಪೊಪ್ಪಿಕೊಂಡರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.