ಬೆಂಗಳೂರು: ಶಕ್ತಿ ಯೋಜನೆ ಜಾರಿಯಾದ ಮೇಲೆ ಸಾರಿಗೆ ನಿಗಮಗಳ ಕೆಂಪು ಬಸ್‌ಗಳಲ್ಲಿ ಸೀಟಿಲ್ಲದೇ ಕಷ್ಟ ಅನುಭವಿಸುವುದನ್ನು ತಪ್ಪಿಸಲು ದೂರದ ಪ್ರಯಾಣಿಕರು ಆಸನ ಕಾಯ್ದಿರಿಸಲು ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಕಾಯ್ದಿರಿಸುವ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ.
ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡುವ ‘ಶಕ್ತಿ’ ಜಾರಿಯಾಗುವ ಮೊದಲು ತಿಂಗಳಿಗೆ ಸರಾಸರಿ 61 ಸಾವಿರ ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸುತ್ತಿದ್ದರು. ಆಗ ರಾಜ್ಯದಲ್ಲಿ ನಿತ್ಯ ಪ್ರಯಾಣಿಸುವವರ ಸರಾಸರಿ ಸಂಖ್ಯೆ 84.5 ಲಕ್ಷ ಇತ್ತು. ಯೋಜನೆ ಜಾರಿಯಾದ ಮೇಲೆ ಪ್ರಯಾಣಿಕರ ಸಂಖ್ಯೆ 30 ಲಕ್ಷ ಹೆಚ್ಚಾಗಿತ್ತು. ಇದರಿಂದ ಬಸ್‌ಗಳಲ್ಲಿ ಸೀಟ್ ಸಿಗುವುದು ಕಷ್ಟವಾಗತೊಡಗಿತ್ತು. ಕೆಲವೆಡೆ ಸೀಟ್‌ಗಾಗಿ ಹೊಡೆದಾಟಗಳೂ ನಡೆದಿದ್ದವು. ಇದರಿಂದ ತಪ್ಪಿಸಿಕೊಳ್ಳಲು ದೂರದ ಊರಿಗೆ ಪ್ರಯಾಣಿಸುವವರು ಆಸನ ಕಾಯ್ದಿರಿಸಿಯೇ ಹೋಗುವುದನ್ನು ರೂಢಿಸಿಕೊಳ್ಳತೊಡಗಿದರು. ಇದರಿಂದಾಗಿ ಕಾಯ್ದಿರಿಸುವ ಪ್ರಮಾಣ ನಿಧಾನಕ್ಕೆ ಏರಿಕೆ ಕಾಣುತ್ತಾ ಬಂದಿದ್ದು, ಏಪ್ರಿಲ್ ತಿಂಗಳಲ್ಲಿ 1.83 ಲಕ್ಷಕ್ಕೆ ತಲುಪಿದೆ.
‘ಪತಿ ಮತ್ತು ಮಗಳೊಂದಿಗೆ ನಾನು ಸುಬ್ರಹ್ಮಣ್ಯಕ್ಕೆ ಹೋಗಿ ಬಂದೆ. ಹಿಂದೆ ರಜೆ ಮತ್ತು ವಿಶೇಷ ದಿನಗಳನ್ನು ಹೊರತುಪಡಿಸಿದರೆ ಬಸ್‌ನಲ್ಲಿ ಹೆಚ್ಚು ದಟ್ಟಣೆ ಇರುತ್ತಿರಲಿಲ್ಲ. ಶಕ್ತಿ ಯೋಜನೆ ಜಾರಿಯಾದ ಮೇಲೆ ಪ್ರಯಾಣಿಕರ ಸಂಖ್ಯೆ ಬಹಳ ಹೆಚ್ಚಾಗಿದೆ. ಸೀಟ್ ಸಿಗದೇ ನಿಂತುಕೊಂಡು ಅಷ್ಟು ದೂರ ಪ್ರಯಾಣಿಸುವುದು ಕಷ್ಟ. ಒಂದು ವೇಳೆ ಸೀಟು ಸಿಕ್ಕಿದರೂ ಒಂದೇ ಕಡೆ ಇರುವ ಬದಲು ಎಲ್ಲೆಲ್ಲೋ ಕುಳಿತುಕೊಳ್ಳಬೇಕು. ಮೊದಲೇ ಟಿಕೆಟ್ ಬುಕ್ಕಿಂಗ್ ಮಾಡಿ ಹೋಗುವುದರಿಂದ ಈ ಯಾವ ಸಮಸ್ಯೆಗಳೂ ಇರುವುದಿಲ್ಲ. ನಾವು ಸುಬ್ರಹ್ಮಣ್ಯಕ್ಕೆ ಹೋಗುವ ಮತ್ತು ಬರುವ ಟಿಕೆಟ್ ಒಮ್ಮೆಲೇ ಬುಕ್ ಮಾಡಿದೆವು. ಶಕ್ತಿ ಯೋಜನೆಯಿಂದ ನನಗೆ ಮತ್ತು ಮಗಳಿಗೆ ಉಚಿತವಾಗಿದ್ದಲ್ಲದೇ, ಎರಡು ಕಡೆಯ ಟಿಕೆಟ್ ಕಾಯ್ದಿರಿಸಿದ್ದರಿಂದ ಮನೆಯವರಿಗೂ ಶೇ 5ರಷ್ಟು ರಿಯಾಯಿತಿ ಸಿಕ್ಕಿತು’ ಎಂದು ಜೆ.ಪಿ. ನಗರದ ಕೃಷ್ಣವೇಣಿ ತಿಳಿಸಿದರು.
‘ಧರ್ಮಸ್ಥಳಕ್ಕೆ ತೆರಳಲು ನಾವು ಟಿಕೆಟ್ ಬುಕ್ ಮಾಡಿ, ಮೆಜೆಸ್ಟಿಕ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಹೋದೆವು. ಅಲ್ಲಿ ನೋಡಿದರೆ ಆ ಬಸ್‌ನಲ್ಲಿ ಬುಕ್ ಮಾಡಿದವರು ಮಾತ್ರ ಇದ್ದರು. ಅನೇಕರು ಬಂದು ಸೀಟ್ ಇದೆಯೇ ಎಂದು ನಿರ್ವಾಹಕರಲ್ಲಿ ಕೇಳಿ ಇಲ್ಲ ಎಂಬುದನ್ನು ತಿಳಿದು ವಾಪಸ್ ಹೋಗುತ್ತಿದ್ದರು. ಇದೇ ರೀತಿ ಅನೇಕ ಬಸ್‌ಗಳು ಬುಕ್ ಮಾಡಿದವರಿಂದಲೇ ಭರ್ತಿಯಾಗಿದ್ದವು. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದನ್ನು ಕಂಡು ಹೆಚ್ಚುವರಿ ಬಸ್‌ಗಳನ್ನು ಹಾಕಿದಾಗ ಟಿಕೆಟ್ ಬುಕ್ ಮಾಡದವರಿಂದಲೇ ಒಮ್ಮೆಲೇ ತುಂಬಿ ಹೋಗಿತ್ತು. ಇದೆಲ್ಲ ನೋಡುವಾಗ ನಾವು ಮುಂಗಡ ಕಾಯ್ದಿರಿಸಿದ್ದು ಎಷ್ಟು ಉಪಯೋಗವಾಯಿತು ಎಂಬುದು ಗೊತ್ತಾಯಿತು’ ಎಂದು ರಾಜಾಜಿನಗರದ ಶೋಭಾ ಅವರು ಅನುಭವ ಹಂಚಿಕೊಂಡರು.
ರಾಮಲಿಂಗಾರೆಡ್ಡಿ ‘ಶಕ್ತಿ ಯೋಜನೆ ಜಾರಿಯಾದ ಮೇಲೆ ದೂರದ ಊರಿಗೆ ಸಾರಿಗೆ ಬಸ್‌ಗಳನ್ನು ಕೂಡ ಜಾಸ್ತಿ ಮಾಡಿದ್ದೇವೆ. ಉತ್ತಮ ಆಸನಗಳನ್ನು ಹೊಂದಿರುವ ‘ಅಶ್ವಮೇಧ’ ಬಸ್‌ಗಳಿಗೆ ‘ಶಕ್ತಿ’ ಪ್ರಯಾಣಿಕರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರಿಗೆ ಬೇಕಾದ ಬಸ್‌ನಲ್ಲಿ ಬೇಕಾದ ಆಸನಗಳನ್ನು ಆಯ್ಕೆ ಮಾಡಲು ಮುಂಗಡ ಕಾಯ್ದಿರಿಸುವಿಕೆ ಉಪಯೋಗವಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ಕೋಟಿಗೂ ಅಧಿಕ ಪ್ರಯಾಣಿಕರು ಯಾವುದೇ ಗೊಂದಲವಿಲ್ಲದೇ ಪ್ರಯಾಣಿಸುತ್ತಿದ್ದಾರೆ. ಸೀಟಿಗಾಗಿ ಎಲ್ಲೋ ಒಂದೆರಡು ಗಲಾಟೆಗಳಾಗಿದ್ದನ್ನೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಬಿಂಬಿಸಲಾಗಿದೆ. ಜನರು ನೆಮ್ಮದಿಯಿಂದ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.
ಅಂಕಿ ಅಂಶ 61000 2023ರ ಜನವರಿಯಿಂದ ಮೇ ವರೆಗೆ ಆಸನ ಕಾಯ್ದಿರಿಸಿದವರ ಸರಾಸರಿ 60566 ‘ಶಕ್ತಿ’ ಜಾರಿಯಾದ ಜೂನ್ ತಿಂಗಳಲ್ಲಿ ಕಾಯ್ದಿರಿಸಿದವರು 168910 2023ರ ಡಿಸೆಂಬರ್‌ನಲ್ಲಿ ಕಾಯ್ದಿರಿಸಿದವರು 183803 2024ರ ಏಪ್ರಿಲ್‌ನಲ್ಲಿ ಕಾಯ್ದಿರಿಸಿದವರು. 563 ಶಕ್ತಿ ಜಾರಿಯಾಗುವ ಮೊದಲು ಇದ್ದ ಸಾರಿಗೆ ಬಸ್‌ಗಳ ಸಂಖ್ಯೆ 627 ಈಗ ರಾಜ್ಯದಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳ ಸಂಖ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.