ADVERTISEMENT

ಜಾಹೀರಾತು ಬೈ–ಲಾ: ನ್ಯಾಯಾಂಗ ನಿಂದನೆ ಮೊಕದ್ದಮೆ ಇಂಗಿತ

ಕನ್ನಡದಲ್ಲಿ ಅಧಿಸೂಚನೆಗೆ ವಿಳಂಬ ಆರೋಪ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 19:40 IST
Last Updated 25 ಸೆಪ್ಟೆಂಬರ್ 2019, 19:40 IST

ಬೆಂಗಳೂರು: ‘ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈ–ಲಾ-2018 ಅನ್ನು ಕನ್ನಡದಲ್ಲಿ ಮುದ್ರಿಸಿ ಅಧಿಸೂಚನೆ ಹೊರಡಿಸಲು ವಿಳಂಬ ಮಾಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬಾರದು’ ಎಂದು ಹೈಕೋರ್ಟ್ ಮೌಖಿಕವಾಗಿ ಪ್ರಶ್ನಿಸಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಜಾಹೀರಾತು ಹಾವಳಿ ತಡೆಯಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಭಾಷಾಂತರಕಾರರು ಲಭ್ಯವಿಲ್ಲದ ಕಾರಣ ಬೈ–ಲಾ ಅನ್ನು ಕನ್ನಡದಲ್ಲಿ ಮುದ್ರಿಸಿ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ಇನ್ನಷ್ಟು ಕಾಲಾವಕಾಶ ಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ಆಕ್ಷೇಪ ವ್ಯಕ್ತಪಡಿಸಿದರು. ‘ಕರ್ನಾಟಕ ಪೌರಾಡಳಿತ ಕಾಯ್ದೆಯ ಕಲಂ 428ರ ಪ್ರಕಾರ ಬೈ–ಲಾ ಅನ್ನು ಅನುಮೋದಿಸಿ ಏಕಕಾಲದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅಧಿಸೂಚನೆ ಹೊರಡಿಸಬೇಕು. ಅದಕ್ಕಾಗಿ ಎರಡೂ ಭಾಷೆಯಲ್ಲಿನ ಬೈ–ಲಾ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕಿತ್ತು. ಕನ್ನಡದಲ್ಲಿ ಅಧಿಸೂಚನೆ ಹೊರಡಿಸದೇ ಹೋದರೆ ಬೈ–ಲಾ ಅನುಷ್ಠಾನಕ್ಕೆ ಬರುವುದಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಕುರಿತಂತೆ ಲೋಪ ಎಸಗಿರುವ ಅಧಿಕಾರಿಗಳ ಹೆಸರುಗಳನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಬೇಕು’ ಎಂದು ಬಿಬಿಎಂಪಿಗೆ ನಿರ್ದೇಶಿಸಿತು. ವಿಚಾರಣೆಯನ್ನು ಅಕ್ಟೋಬರ್‌ 15ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.