ADVERTISEMENT

ಬಿಜೆಪಿಯಿಂದ ‘ನಂದಿನಿ’ ನಂತರ ‘ಅಮೂಲ್‌’ ಮುಳುಗಡೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 5:19 IST
Last Updated 12 ಏಪ್ರಿಲ್ 2023, 5:19 IST
   

ಬೆಂಗಳೂರು(ಪ್ರಜಾವಾಣಿ ವಾರ್ತೆ) : ‘ಪ್ರಧಾನಿ ಮೋದಿಯವರ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ. ಬಿಜೆಪಿಯವರು ಅದಾನಿ, ಅಂಬಾನಿಗಳ ವ್ಯವಹಾರದ ಪರವಾಗಿದ್ದಾರೆ. ಹೀಗಾಗಿ ನಂದಿನಿಯನ್ನು ಮೊದಲು ಮುಳುಗಿಸಿ ನಂತರ ಅಮೂಲ್‌ ಮುಳುಗಿಸುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

‘ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ರಾಜ್ಯದ ಹಾಲು ಉತ್ಪಾದಕರ ಬೆನ್ನೆಲು‌ಬು ಮುರಿಯಲು ಪ್ರಯತ್ನಿಸುತ್ತಿದೆ ಎಂದು 2020ರಿಂದಲೂ ನಾನು ಹೇಳುತ್ತಲೇ ಬಂದಿದ್ದೇನೆ ಎಂದರು.

ಸದನದಲ್ಲಿಯೂ ಪ್ರಸ್ತಾಪಿಸಿದ್ದೇನೆ. ನನ್ನ ಸಲಹೆ, ಎಚ್ಚರಿಕೆಯನ್ನು ಪರಿಗಣಿಸುವ ಬದಲು ರೈತರನ್ನು ಶತ್ರುಗಳೆಂದು ಭಾವಿಸಿ, ಅವರ ಆರ್ಥಿಕ ಚೈತನ್ಯ ಮುರಿದು ಹಾಕಲು ಸನ್ನದ್ಧವಾಗಿ ನಿಂತಿದೆ’ ಎಂದಿದ್ದಾರೆ.

ADVERTISEMENT

‘ಹಾಲು ಮಹಾಮಂಡಲಗಳನ್ನು ಒಗ್ಗೂಡಿಸುವುದಾಗಿ ಅಮಿತ್‍ ಶಾ ಹೇಳಿ‌ದ್ದರು. ಅದರ ಭಾಗವಾಗಿ ಈಗ ರಾಜ್ಯಕ್ಕೆ ಅಮೂಲ್‌ ವಕ್ಕರಿಸಿದೆ. ಈಗ ನಂದಿನಿ ಆತಂಕ ಎದುರಿಸುತ್ತಿದೆ. ಮೋದಿ ಮತ್ತು ‌ಶಾ ನಮ್ಮ ನಂದಿನಿಯನ್ನಷ್ಟೆ ಅಲ್ಲ, ಅಮೂಲ್‌ನ್ನೂ ಮುಳುಗಿಸಲು ಯೋಜನೆ ಹಾಕಿಕೊಂಡಿರುವಂತಿದೆ’ ಎಂದೂ ಅವರು ಹೇಳಿದ್ದಾರೆ.

‘ಬಿಜೆಪಿಯವರು ಪಶುಪಾಲಕರ ಪರವಾಗಿದ್ದರೆ ಹಿಂಡಿ ಮತ್ತಿತರ ಪಶು ಆಹಾರಗಳ ಮೇಲೆ ವಿಧಿಸುತ್ತಿರುವ ಜಿಎಸ್‍ಟಿ‌ ಯಾಕೆ ರದ್ದು ಮಾಡಿಲ್ಲ. ಪ್ರತಿ ಲೀಟರ್ ಹಾಲಿಗೆ ಕೊಡುವ ಪ್ರೋತ್ಸಾಹಧನವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾಕೆ ಹೆಚ್ಚು ಮಾಡಲಿಲ್ಲ‌. ಮಕ್ಕಳಿಗೆ ಹಾಲು ಕೊಡುವುದನ್ನು ನಿಲ್ಲಿಸಿರುವುದು ಏಕೆ. ಮಕ್ಕಳ ಹಾಲಿಗೆ ಬಿಡುಗಡೆ ಮಾಡಬೇಕಾದ ಅನುದಾನ ನಿಲ್ಲಿಸಿರುವುದು ಏಕೆ’ ಎಂದೂ ಅವರು
ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.