ಬೆಂಗಳೂರು: ತೋಟಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ತಾಂತ್ರಿಕ ಸಲಹೆ, ಮಾರುಕಟ್ಟೆ ಸಂಪರ್ಕ, ಬೇಸಾಯ ಪರಿಕರಗಳ ಮತ್ತು ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸುವ ‘ಮೈಸೂರು ಕಿಸಾನ್ ಮಾಲ್’ಗಳನ್ನು ಮೈಸೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.
2024–25ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕಿಸಾನ್ ಮಾಲ್’ಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತೋಟಗಾರಿಕಾ ಇಲಾಖೆ ಸಜ್ಜಾಗಿದೆ. ಎರಡು ತಿಂಗಳಲ್ಲಿ ‘ಕಿಸಾನ್ ಮಾಲ್’ಗಳು ಕಾರ್ಯಾರಂಭ ಮಾಡಲಿದ್ದು, ಅವುಗಳ ಯಶಸ್ಸನ್ನು ಆಧರಿಸಿ ಇನ್ನೂ ಏಳು ಜಿಲ್ಲೆಗಳಿಗೆ ಯೋಜನೆ ವಿಸ್ತರಿಸುವ ಪ್ರಸ್ತಾವ ಇಲಾಖೆ ಮುಂದಿದೆ.
ಬೀಜ, ಸಸ್ಯ ಪೋಷಕಾಂಶಗಳು, ರಾಸಾಯನಿಕ, ಎರೆಹುಳು, ಜೈವಿಕ ಗೊಬ್ಬರಗಳು, ಬೆಳೆ ಹಾರ್ಮೋನುಗಳು, ಕೃಷಿ ಪರಿಕರಗಳು, ಪೀಡೆನಾಶಕಗಳು, ಮಾರುಕಟ್ಟೆ ಸಂಪರ್ಕ, ತಾಂತ್ರಿಕ ಸಲಹೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒಂದೇ ಸೂರಿನಡಿ ರೈತರಿಗೆ ಕಲ್ಪಿಸುವುದು ಈ ಮಾಲ್‌ಗಳ ಉದ್ದೇಶವಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ವಿಷಯ ತಜ್ಞರು ರೈತರಿಗೆ ಬೆಳೆ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ ಮಾಡುವುದರ ಕುರಿತು ಸಲಹೆಗಳನ್ನೂ ನೀಡಲಿದ್ದಾರೆ.
ಕಿಸಾನ್ ಮಾಲ್‌ನ ಸಿಬ್ಬಂದಿ ರೈತರು ಬೆಳೆದ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರ್ಗದರ್ಶನ ಮಾಡುತ್ತಾರೆ. ವಿವಿಧ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯದ ಮಾಹಿತಿ ನೀಡುವುದು, ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಕೊಯ್ಲೋತ್ತರ ತಂತ್ರಜ್ಞಾನ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರಕುವ ಸಹಾಯಧನಗಳ ಬಗ್ಗೆಯೂ ಸಲಹೆ ನೀಡುತ್ತಾರೆ.
‘ಒಂದು ಕಿಸಾನ್ ಮಾಲ್ ಪ್ರಾರಂಭಿಸಲು ಒಟ್ಟು ₹30 ಲಕ್ಷ ಅನುದಾನ ಒದಗಿಸಲಾಗುತ್ತದೆ. ಇಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥಾಪಕರು, ತಾಂತ್ರಿಕ ಸಲಹೆಗಾರರು ಹಾಗೂ ಕಚೇರಿ ಸಿಬ್ಬಂದಿ ವೇತನಕ್ಕೆ ₹15 ಲಕ್ಷ ಹಾಗೂ ಕಿಸಾನ್ ಮಾಲ್‌ನ ಕಟ್ಟಡದ ನವೀಕರಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ₹15 ಲಕ್ಷ ಅನುದಾನ ನೀಡಲಾಗುತ್ತದೆ. ಈ ಮಾಲ್‌ಗಳನ್ನು ನಿರ್ವಹಿಸುವ ಎಫ್‌ಪಿಒಗಳ ಮೂಲಕ ನಿರ್ವಹಣೆ ಮಾಡಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ರಮೇಶ್ ಡಿ.ಎಸ್. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಮಾಲ್‌ಗಳನ್ನು ನಡೆಸಲು ಆಯಾ ಜಿಲ್ಲೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಎಫ್‌ಪಿಒಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಎರಡು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದರು.
‘ಕೈಗೆಟುಕುವ ಬೆಲೆಯಲ್ಲಿ ತೋಟಗಾರಿಕಾ ಉತ್ಪನ್ನಗಳು’
‘ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದ ಬೀಜ ಸಸಿಗಳಿಂದ ಪ್ರಾರಂಭಿಸಿ ಕೊಯ್ಲೋತ್ತರ ತಂತ್ರಜ್ಞಾನದವರೆಗೆ ಎಲ್ಲ ರೀತಿಯ ಗುಣಮಟ್ಟದ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಕಿಸಾನ್ ಮಾಲ್ ಎಂಬ ಸೇವಾಕೇಂದ್ರಗಳ ಮೂಲಕ ರೈತರಿಗೆ ತಂತ್ರಜ್ಞಾನ ಆಧಾರಿತ ತಾಂತ್ರಿಕ ಸಲಹೆಗಳನ್ನು ನೀಡಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ರಮೇಶ್ ಡಿ.ಎಸ್. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.