ADVERTISEMENT

ಮಾವಿನ ಹಣ್ಣುಗಳ ವಿಂಗಡಣೆಗೆ ‘ಎಐ’ ತಂತ್ರಜ್ಞಾನ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ, ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯುತ್ತಿದೆ

ಖಲೀಲಅಹ್ಮದ ಶೇಖ
Published 14 ನವೆಂಬರ್ 2024, 22:48 IST
Last Updated 14 ನವೆಂಬರ್ 2024, 22:48 IST
ಮಾವಿನ ಹಣ್ಣುಗಳನ್ನು ವಿಂಗಡಿಸುವ ಎಐ ತಂತ್ರಜ್ಞಾನ ಆಧಾರಿತ ಯಂತ್ರ
ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.
ಮಾವಿನ ಹಣ್ಣುಗಳನ್ನು ವಿಂಗಡಿಸುವ ಎಐ ತಂತ್ರಜ್ಞಾನ ಆಧಾರಿತ ಯಂತ್ರ ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.   

ಬೆಂಗಳೂರು: ಮಾವಿನ ಹಣ್ಣುಗಳ ಕಪ್ಪು ಚುಕ್ಕೆ, ಹಾನಿ, ಬಣ್ಣ ಹಾಗೂ ಅದರ ಪಕ್ವತೆಯ ಆಧಾರದ ಮೇಲೆ ಹಣ್ಣುಗಳನ್ನು ವಿಂಗಡಿಸಲು ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಯಂತ್ರ ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿದೆ.

ಸಣ್ಣ ಮತ್ತು ಮಧ್ಯಮ ವರ್ಗದ ಮಾವಿನ ಹಣ್ಣು ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳು ಈ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.

ಮಾವಿನ ಹಣ್ಣಿನ ಪಕ್ವತೆ ಸೂಚ್ಯಂಕ, ಕೊಯ್ಲು ಮಾಡಿದ ನಂತರ ಹಣ್ಣಿಗೆ ಆಗಿರುವ ಹಾನಿಯನ್ನು ಕಂಡು ಹಿಡಿಯಲು ‘2 ಮೀಟರ್‌ ಉದ್ದ, 0.5 ಮೀ ಅಗಲ ಹಾಗೂ 1 ಮೀ ಎತ್ತರದ ಛಾಯಾಚಿತ್ರ ಸಂಸ್ಕರಣಾ ವ್ಯವಸ್ಥೆ’ಯನ್ನು ವಿನ್ಯಾಸಗೊಳಿಸಿ, ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಂವೇದನಾ ತಂತ್ರಜ್ಞಾನದಂತೆ ಕೆಲಸ ಮಾಡುತ್ತದೆ. ಹಣ್ಣಿನ ಬಣ್ಣ, ಪ್ರಬುದ್ಧತೆ, ಕಪ್ಪು ಚುಕ್ಕೆಗಳ ಆಧಾರದ ಮೇಲೆ ಗುಣಮಟ್ಟದ ಹಣ್ಣುಗಳನ್ನು ಹಾನಿಗೊಳಗಾದ ಹಣ್ಣುಗಳನ್ನು ಪ್ರತ್ಯೇಕ ಚೀಲಗಳಲ್ಲಿ ಸಂಗ್ರಹಿಸುತ್ತದೆ.

ADVERTISEMENT
ರೈತರ ಶ್ರಮ ಆರ್ಥಿಕ ವೆಚ್ಚ ಕಡಿಮೆ ಮಾಡುವ ಉದ್ಧೇಶದಿಂದ ಎಐ ತಂತ್ರಜ್ಞಾನ ಆಧಾರಿತ ಮಾವಿನ ಹಣ್ಣುಗಳ ವಿಂಗಡಿಸುವ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ.
ದ್ರೋಣಾಚಾರಿ, ಮಾನ್ವಿ ಸಹಾಯಕ ಪ್ರಾಧ್ಯಾಪಕ ಸಂಸ್ಕರಣೆ ಮತ್ತು ಆಹಾರ ಎಂಜಿನಿಯರಿಂಗ್ ವಿಭಾಗ

‘ಮಲ್ಲಿಕಾ ತಳಿಯ ಮಾವಿನ ಹಣ್ಣುಗಳನ್ನು ಎಐ ತಂತ್ರಜ್ಞಾನ ಆಧಾರಿತ ಯಂತ್ರಕ್ಕೆ ಬಳಸಿಕೊಳ್ಳಲಾಗಿದೆ. ಮಾವಿನ ಹಣ್ಣಿಗೆ ಆಗಿರುವ ಹಾನಿಯನ್ನು ಗುರುತಿಸಲು ಒಪೆನ್‌ ಸಿ.ವಿ., ಪೈಥಾನ್‌ನ ನಂಪೈ ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು ಅಲ್ಗಾರಿದಮ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಕಡಿಮೆ ಸಮಯದ ಬಳಕೆಯಲ್ಲಿ ಹೆಚ್ಚಿನ ಉತ್ಪಾದಕತೆ, ಗುಣಮಟ್ಟದ ವಿಂಗಡಣೆಯೊಂದಿಗೆ ಪರಿಣಾಮಕಾರಿ ಪರಿಹಾರವನ್ನು ಒದಗಿಸುವುದರ ಜೊತೆಗೆ ನಿಖರವಾಗಿ ಕೆಲಸ ಮಾಡುತ್ತದೆ’ ಎಂದು ಸಂಸ್ಕರಣೆ ಮತ್ತು ಆಹಾರ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ದ್ರೋಣಾಚಾರಿ ಮಾನ್ವಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇದು ಮಾವಿನ ಹಣ್ಣುಗಳನ್ನು ರಫ್ತು ಮಾಡಲು ಬೇಕಾಗಿರುವ ಗ್ರೇಡಿಂಗ್‌ ಮಾನದಂಡಗಳನ್ನು ಪೂರೈಸುತ್ತದೆ. ಮಾವು ಬೆಳೆಗಾರರು, ಸಂಸ್ಕರಣೆದಾರರು, ವ್ಯಾಪಾರಿಗಳು, ಪ್ಯಾಕ್‌ ಹೌಸ್‌ಗಳು ಹಾಗೂ ತೋಟಗಾರಿಕೆ ಇಲಾಖೆಯವರಿಗೆ ಹೆಚ್ಚು ಸಹಕಾರಿ ಆಗಲಿದೆ. ಎಐ ಯಂತ್ರವೂ ಪ್ರತಿಗಂಟೆ 600 ರಿಂದ 800 ಕೆ.ಜಿ. ಹಣ್ಣುಗಳನ್ನು ವಿಂಗಡಿಸುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ವಿವರಿಸಿದರು. 

ಪಕ್ಷಿಗಳ ಹಾವಳಿ ನಿಯಂತ್ರಣಕ್ಕೆ ಬರ್ಡ್‌ ಸ್ಕೇರರ್‌

ಸೂರ್ಯಕಾಂತಿ ಮತ್ತು ಮೆಕ್ಕೆಜೋಳದ ಬೆಳೆಗಳಲ್ಲಿನ ಪಕ್ಷಿಗಳ ಹಾವಳಿಯನ್ನು ನಿಯಂತ್ರಿಸಲು ಸೌರಶಕ್ತಿ ಚಾಲಿತ ಬರ್ಡ್‌ ಸ್ಕೇರರ್‌ ಉಪಕರಣವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ಎಂಜಿನಿಯರಿಂಗ್ ವಿಭಾಗವು ಅಭಿವೃದ್ಧಿಪಡಿಸಿದೆ. 

‘ಈ ಉಪಕರಣವು ಪ್ರತಿ 15 ನಿಮಿಷಗಳಂತೆ ಮೂರು ವಿಭಿನ್ನ ರೀತಿಯ ಶಬ್ದ ಮಾಡಲಿದೆ. ತಟ್ಟೆ ಬಡಿಯುವ ಶಬ್ದ ಸೈರನ್‌ ಹಾಗೂ ರೆಕಾರ್ಡ್‌ ಮಾಡಿದ ಮಾನವನ ಧ್ವನಿಯ ಶಬ್ದ ಮಾಡಲಿದೆ. ಇದು ಸೌರಶಕ್ತಿ ಚಾಲಿತವಾಗಿದ್ದು ಚಾರ್ಜ್‌ ಮಾಡಲು ಬ್ಯಾಟರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ’ ಎಂದು ದ್ರೋಣಾಚಾರಿ ಮಾನ್ವಿ ವಿವರಿಸಿದರು.

ಬರ್ಡ್‌ ಸ್ಕೇರರ್‌ ಉಪಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.