ADVERTISEMENT

ರೋಗಿಗಳ ಮೇಲೆ ಎಐ ನಿಗಾ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 23:09 IST
Last Updated 25 ಅಕ್ಟೋಬರ್ 2024, 23:09 IST
<div class="paragraphs"><p>ಅಧ್ಯಯನ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಹಿಮಾಂಶು ದಂಡು, ಡಾ. ಅಂಬುಜ್ ಯಾದವ್, ಗೌರವ್ ಪರ್ಚಾನಿ ಹಾಗೂ ಡಾ. ರಾಜೇಶ್ ಮಿಶ್ರಾ ಉಪಸ್ಥಿತರಿದ್ದರು</p></div>

ಅಧ್ಯಯನ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಹಿಮಾಂಶು ದಂಡು, ಡಾ. ಅಂಬುಜ್ ಯಾದವ್, ಗೌರವ್ ಪರ್ಚಾನಿ ಹಾಗೂ ಡಾ. ರಾಜೇಶ್ ಮಿಶ್ರಾ ಉಪಸ್ಥಿತರಿದ್ದರು

   

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ವೈದ್ಯಕೀಯ ಸಾಧನಗಳ ನೆರವಿನಿಂದ ರೋಗಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಡೋಝೀ ಸಂಸ್ಥೆ ರೂಪಿಸಿದ್ದು, 706 ರೋಗಿಗಳ ಮೇಲೆ ಅಧ್ಯಯನ ನಡೆಸಿದೆ. 

ಸಂಸ್ಥೆಯು ಇಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಲಾಯಿತು. ಈ ಅಧ್ಯಯನವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಸಹಯೋಗದಲ್ಲಿ ನಡೆಸಲಾಗಿದೆ. 

ADVERTISEMENT

ಈ ಅಧ್ಯಯನದ ಬಗ್ಗೆ ಮಾತನಾಡಿದ ಕೆಜಿಎಂಯು ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಹಿಮಾಂಶು ದಂಡು, ‘ಆಸ್ಪತ್ರೆಗಳಲ್ಲಿನ ಬೆಡ್‌ಗಳಿಗೆ ಅಳವಡಿಸುವ ‘ಡೋಝೀ ಪಾಡ್’ ಸಾಧನ ಹಾಗೂ ಸೆನ್ಸರ್ ಶೀಟ್‌ಗಳ ನೆರವಿನಿಂದ ರೋಗಿಯ ಆರೋಗ್ಯ ಸ್ಥಿತಿ ಹದಗೆಡುವ 16 ಗಂಟೆಗಳ ಮೊದಲೇ ಸೂಚನೆಗಳು ನಿಯಂತ್ರಣಾ ಕೊಠಡಿಗಳಿಗೆ ರವಾನೆಯಾಗಲಿವೆ. ಇದರಿಂದ ರೋಗಿಯ ಆರೋಗ್ಯ ಸ್ಥಿತಿ ಸುಧಾರಣೆಗೆ ಕ್ರಮವಹಿಸಲು, ಪ್ರಾಣಾಪಾಯದಿಂದ ಪಾರು ಮಾಡಲು ಸಾಧ್ಯವಾಗುತ್ತದೆ. ಈ ಅಧ್ಯಯನ ವರದಿಯನ್ನು ಫ್ರಂಟಿಯರ್ಸ್ ಗ್ರೂಪ್ ಪ್ರಕಟ ಮಾಡಿದೆ’ ಎಂದು ತಿಳಿಸಿದರು. 

‘ಸಾಮಾನ್ಯ ವಾರ್ಡ್‌ಗಳಲ್ಲಿ ರೋಗಿಗಳನ್ನು ನಿರ್ವಹಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಸಿಬ್ಬಂದಿಯ ಸಮಯವನ್ನೂ ಉಳಿಸಬಹುದಾಗಿದೆ. ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ನಿಗಾ ವ್ಯವಸ್ಥೆ ತೀವ್ರ ನಿಗಾ ಘಟಕಗಳಿಗೆ (ಐಸಿಯು) ಮಾತ್ರ ಸೀಮಿತವಾಗಿದೆ. ಸಾಮಾನ್ಯ ವಾರ್ಡ್‌ಗಳಲ್ಲಿನ ರೋಗಿಗಳ ಆರೋಗ್ಯ ಸ್ಥಿತಿ ಹದ ಗೆಡುತ್ತಿರುವುದು ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಎಐ ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆಯಿಂದ ಹೃದಯ ಬಡಿತ, ಉಸಿರಾಟ, ರಕ್ತದೊತ್ತಡದಂತಹ ದೇಹದ ಪ್ರಮುಖ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಸಾಧ್ಯವಾಗಲಿದ್ದು, ದೇಹದಲ್ಲಿ ವ್ಯತ್ಯಾಸವಾದರೆ ಸೂಚನೆಗಳು ರವಾನೆಯಾಗಲಿವೆ’ ಎಂದರು. 

ಡೋಝೀಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ಪರ್ಚಾನಿ, ‘ಲಖನೌದಲ್ಲಿರುವ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವ ವಿದ್ಯಾಲಯದ ಎರಡು ವಾರ್ಡ್‌ಗಳಲ್ಲಿ ಈ ಸಾಧನಗಳನ್ನು ಅಳವಡಿಸಿ, ಅಧ್ಯಯನ ನಡೆಸಲಾಗಿದೆ. ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಲು ಇದು ಸಹಕಾರಿಯಾಗಿದೆ. ಐಸಿಯು ಮೇಲಿನ ಭಾರವನ್ನು ಇಳಿಸಲಿದೆ’ ಎಂದು ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.