ADVERTISEMENT

ಸಿಗ್ನಲ್‌ಗಳಿಗೆ ‘ಎಐ’ ಸ್ಪರ್ಶ: ಪ್ರಯಾಣಿಕರಿಗೆ ತರಲಿದೆ ಹರ್ಷ

41 ಸಿಗ್ನಲ್‌ಗಳಲ್ಲಿ ಹೊಸ ತಂತ್ರಜ್ಞಾನದ ಸಿಗ್ನಲ್‌ ಅಳವಡಿಕೆ, ಇನ್ನೂ 124 ಸ್ಥಳಗಳಲ್ಲಿ ಬರಲಿವೆ ಎಐ ಸಿಗ್ನಲ್‌

ಖಲೀಲಅಹ್ಮದ ಶೇಖ
Published 24 ಸೆಪ್ಟೆಂಬರ್ 2024, 22:25 IST
Last Updated 24 ಸೆಪ್ಟೆಂಬರ್ 2024, 22:25 IST
ಬಸವನಗುಡಿ ನ್ಯಾಷನಲ್ ಕಾಲೇಜು ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ತಂತ್ರಜ್ಞಾನ ಆಧಾರಿತ ಎಟಿಸಿಎಸ್‌ ಟ್ರಾಫಿಕ್‌ ಸಿಗ್ನಲ್‌    ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.
ಬಸವನಗುಡಿ ನ್ಯಾಷನಲ್ ಕಾಲೇಜು ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ತಂತ್ರಜ್ಞಾನ ಆಧಾರಿತ ಎಟಿಸಿಎಸ್‌ ಟ್ರಾಫಿಕ್‌ ಸಿಗ್ನಲ್‌    ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ನಗರದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿ ಸಿಗ್ನಲ್‌ಗಳ ಅಸಮರ್ಪಕ ನಿರ್ವಹಣೆಯೇ ಸಂಚಾರ ದಟ್ಟಣೆ ಹೆಚ್ಚಳದ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಪ್ರತಿ ಸಿಗ್ನಲ್‌ಗೂ ಕಾಲಮಿತಿ ಅಳವಡಿಸಿ ವಾಹನ ಸಂಚಾರ ನಿಯಂತ್ರಣ ಮಾಡುವ ಹಳೆಯ ವ್ಯವಸ್ಥೆಯ ಬದಲಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಹಸಿರು ನಿಶಾನೆ ನೀಡುವ ‘ಅಡ್ಯಾಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಸ್ಟಮ್‌’ (ಎಟಿಸಿಎಸ್‌)ನ ಪ್ರಾಯೋಗಿಕ ಅನುಷ್ಠಾನ ಬಹುತೇಕ ಯಶಸ್ವಿಯಾಗಿದೆ.

ಎಟಿಸಿಎಸ್‌ ಬಳಕೆಯಿಂದ ಸಂಚಾರ ದಟ್ಟಣೆ ತಗ್ಗಿಸುವುದು ಸಾಧ್ಯವಾಗಲಿದೆ ಎಂಬ ಭರವಸೆ ಮೂಡಿದ ಬೆನ್ನಲ್ಲೇ ಈ ವ್ಯವಸ್ಥೆಯನ್ನು ನಗರದ ಇನ್ನಷ್ಟು ಕಡೆ ಅಳವಡಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ಮುಂದಾಗಿವೆ.

ಐಟಿ ಸಿಟಿ, ಉದ್ಯಾನ ನಗರಿ ಖ್ಯಾತಿಯ ಬೆಂಗಳೂರು, ಸಂಚಾರ ದಟ್ಟಣೆ ನಗರಿಯಾಗಿ ಮಾರ್ಪಟ್ಟಿದೆ. ಹೊರವರ್ತುಲ ರಸ್ತೆಗಳು, ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ದಟ್ಟಣೆ ಸಾಮಾನ್ಯವಾಗಿದೆ. ನಿತ್ಯ ಕೆಲಸಕ್ಕೆ ಹೋಗುವ ಜನ ವಾಹನ ದಟ್ಟಣೆಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.

ADVERTISEMENT

ಹಳೆಯ ಮಾದರಿಯ ಸಿಗ್ನಲ್‌ಗಳ ನಿರ್ವಹಣೆಯಲ್ಲಿ ಅಂದಾಜಿನ ಆಧಾರದಲ್ಲಿ ಕಾಲಮಿತಿ ಅಳವಡಿಸಲಾಗುತ್ತದೆ.  ಇದರಿಂದ ದಟ್ಟಣೆಯ ರಸ್ತೆಗಳಲ್ಲಿ ಸಂಚರಿಸುವವರಿಗೆ ನಿತ್ಯವೂ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕೆ ನಗರದ ಪ್ರಮುಖ ವೃತ್ತಗಳಲ್ಲಿ ಎಐ ಚಾಲಿತ ಎಟಿಸಿಎಸ್‌ ಸಿಗ್ನಲ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ನಗರದಲ್ಲಿ ಹೆಚ್ಚು ದಟ್ಟಣೆಯಾಗುವ ರಸ್ತೆಗಳಲ್ಲಿ ದೀರ್ಘ ಕಾಲ ಹಸಿರು ಬಣ್ಣದ ಸಿಗ್ನಲ್‌ಗಾಗಿ ವಾಹನ ಸವಾರರು ಕಾಯುತ್ತಿದ್ದರು. ಈಗ ಎಐ ಚಾಲಿತ ಸ್ಮಾರ್ಟ್‌ ಸಿಗ್ನಲ್‌ಗಳಲ್ಲಿ ‘ವೆಹಿಕಲ್‌ ಆಕ್ಚುಯೇಟೆಡ್‌ ಕಂಟ್ರೋಲ್ಡ್‌’ (ವಿಎಸಿ) ತಂತ್ರಜ್ಞಾನದ ಬಳಕೆಯಿಂದಾಗಿ ಕಾಯುವಿಕೆಯ ಸಮಯ ತಗ್ಗಲಿದೆ.

‘ವಾಹನಗಳ ದಟ್ಟಣೆ ಆಧರಿಸಿ ಸ್ವಯಂಚಾಲಿತ ಸಿಗ್ನಲ್ ನಿರ್ವಹಣೆ ತಂತ್ರಜ್ಞಾನ (ಎಟಿಸಿಎಸ್‌) ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೊಳಿಸಲಾಗಿದೆ. ವೃತ್ತಗಳಿಗೆ ಹೊಂದಿಕೊಂಡಿರುವ ಎಲ್ಲ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ದಟ್ಟಣೆಯನ್ನು ಕ್ಯಾಮೆರಾಗಳ ಮೂಲಕ ಎಟಿಸಿಎಸ್‌ ವ್ಯವಸ್ಥೆ ಗ್ರಹಿಸಿ, ಹಸಿರು ಸಿಗ್ನಲ್‌ ನೀಡಿ ಮುಂದಕ್ಕೆ ಕಳುಹಿಸಲಿದೆ’ ಎಂದು ಯೋಜನೆ ಅನುಷ್ಠಾನದ ಜವಾಬ್ದಾರಿ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಡಿಮೆ ಸಮಯದಲ್ಲಿ ಒಂದು ಜಂಕ್ಷನ್‌ನಿಂದ ಮತ್ತೊಂದು ಜಂಕ್ಷನ್‌ಗೆ ವಾಹನಗಳು ಸಂಚರಿಸಲು ಈ ನೂತನ ತಂತ್ರಜ್ಞಾನ ನೆರವಾಗಲಿದೆ. ಪ್ರತಿ ಸಿಗ್ನಲ್‌ನಲ್ಲಿ 10 ಸೆಕೆಂಡ್ ಸಮಯ ಉಳಿಸಿದರೆ 10 ಸಿಗ್ನಲ್ ದಾಟುವ ಹೊತ್ತಿಗೆ 100 ಸೆಕೆಂಡ್ ಸಮಯ ಉಳಿತಾಯವಾಗುತ್ತದೆ. ಸಂಚಾರ ಸಮಯ ಉಳಿಸುವ ಜೊತೆಗೆ ಇಂಧನವನ್ನೂ ಉಳಿಸಬಹುದು’ ಎಂದು ಸಂಚಾರ ಪೊಲೀಸರೊಬ್ಬರು ತಿಳಿಸಿದರು.

‘₹53 ಕೋಟಿ ವೆಚ್ಚದಲ್ಲಿ ನಗರದ 165 ವೃತ್ತಗಳಲ್ಲಿ ಎಟಿಸಿಎಸ್‌ ತಂತ್ರಜ್ಞಾನ ಆಧಾರಿತ ಸಿಗ್ನಲ್‌ಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಸದ್ಯ ನಗರದ 41 ವೃತ್ತಗಳಲ್ಲಿ ಈ ಸಿಗ್ನಲ್‌ಗಳನ್ನು ಅಳವಡಿಸಿ, ಬಳಸಲಾಗುತ್ತಿದೆ’ ಎಂದರು.

‘ಟ್ಯಾಗೋರ್‌ ಪಾರ್ಕ್‌ ಜಂಕ್ಷನ್‌, ವಿಶ್ವೇಶ್ವರಪುರ ಕಾಲೇಜಿನ ಜಂಕ್ಷನ್‌, ಪೈ ವಿಸ್ತಾ ಕೆ.ಆರ್. ರಸ್ತೆ, ಜಯನಗರ 4ನೇ ಮುಖ್ಯರಸ್ತೆಯ 40ನೇ ಕ್ರಾಸ್‌ ಹಾಗೂ 36ನೇ ಕ್ರಾಸ್‌, ಜಯನಗರದ ನ್ಯೂ ಡಯಾಗೊನಲ್ ರಸ್ತೆ, ಜಯನಗರ 4ನೇ ಮುಖ್ಯರಸ್ತೆಯ ಒಂಬತ್ತನೇ ಕ್ರಾಸ್‌ನಲ್ಲಿ ಹೊಸ ಸಿಗ್ನಲ್‌ಗಳನ್ನು ಅಳವಡಿಸಲಾಗಿದ್ದು, ಉಳಿದ ಪ್ರದೇಶಗಳಲ್ಲಿ ಇರುವ ಸಿಗ್ನಲ್‌ಗಳನ್ನು ಉನ್ನತೀಕರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ನೂತನ ಸಿಗ್ನಲ್‌ಗಳ ಅಳವಡಿಕೆ: 165 ವೃತ್ತಗಳಲ್ಲಿ ಎಟಿಸಿಎಸ್ ವ್ಯವಸ್ಥೆಯನ್ನು ಅಳವಡಿಸಿ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಸಿ–ಡಾಕ್‌ ಕಂಪನಿಗೆ ವಹಿಸಲಾಗಿದೆ. ಕಂಪನಿ ಅಧಿಕಾರಿಗಳು, ಸ್ಥಳೀಯ ಕಾರ್ಮಿಕರೊಂದಿಗೆ ನೂತನ ಸಿಗ್ನಲ್‌ಗಳನ್ನು ಅಳವಡಿಸುತ್ತಿದ್ದಾರೆ. ಈಗಾಗಲೇ 41 ಸಿಗ್ನಲ್‌ಗಳಲ್ಲಿ ಈ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತಿದೆ.

ಬಸವನಗುಡಿ ನ್ಯಾಷನಲ್ ಕಾಲೇಜು ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ತಂತ್ರಜ್ಞಾನ ಆಧಾರಿತ ಎಟಿಸಿಎಸ್‌ ಟ್ರಾಫಿಕ್‌ ಸಿಗ್ನಲ್‌    ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.
ಬಸವನಗುಡಿ ನ್ಯಾಷನಲ್ ಕಾಲೇಜು ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ತಂತ್ರಜ್ಞಾನ ಆಧಾರಿತ ಎಟಿಸಿಎಸ್‌ ಟ್ರಾಫಿಕ್‌ ಸಿಗ್ನಲ್‌    ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.
ಬಸವನಗುಡಿ ನ್ಯಾಷನಲ್ ಕಾಲೇಜು ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ತಂತ್ರಜ್ಞಾನ ಆಧಾರಿತ ಎಟಿಸಿಎಸ್‌ ಟ್ರಾಫಿಕ್‌ ಸಿಗ್ನಲ್‌    ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.
₹53 ಕೋಟಿ ಯೋಜನೆಯ ಒಟ್ಟು ವೆಚ್ಚ 165 ಜಂಕ್ಷನ್‌ಗಳಲ್ಲಿ ಎಐ ಸಿಗ್ನಲ್‌ ಅಳವಡಿಸುವ ಯೋಜನೆ 41 ಜಂಕ್ಷನ್‌ಗಳಲ್ಲಿ ಎಐ ಆಧಾರಿತ ಸಿಗ್ನಲ್‌ ಕಾರ್ಯಾಚರಣೆ

‘ವರ್ಷಾಂತ್ಯದೊಳಗೆ ಎಲ್ಲ ಕಡೆ ಎಐ ಸಿಗ್ನಲ್’

‘ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಿರಂತರ ಹೊಸ ಪ್ರಯೋಗ ನಡೆಯುತ್ತಿದೆ. ಇದರ ಭಾಗವಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧರಿಸಿದ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಬೆಂಗಳೂರು ನಗರದಲ್ಲಿ ಬಹುತೇಕ ಜಂಕ್ಷನ್‌ಗಳಲ್ಲಿ ಎಐ ಚಾಲಿತ ಟ್ರಾಫಿಕ್‌ ಸಿಗ್ನಲ್‌ಗಳು ಕಾರ್ಯನಿರ್ವಹಿಸಲಿವೆ’ ಎಂದು ಜಂಟಿ ಪೊಲೀಸ್ ಕಮಿಷನರ್‌ (ಸಂಚಾರ ವಿಭಾಗ) ಎಂ.ಎನ್‌.ಅನುಚೇತ್‌ ಹೇಳಿದರು. ‘ನಗರದ 41 ಜಂಕ್ಷನ್‌ಗಳಲ್ಲಿ ಎಐ ಎಟಿಸಿಎಸ್‌ ತಂತ್ರಜ್ಞಾನ ಅನುಷ್ಠಾನಗೊಳಿಸಲಾಗಿದೆ. ವಾಹನ ಸವಾರರು ಈ ಸಿಗ್ನಲ್‌ಗಳಲ್ಲಿ ಹೆಚ್ಚು ಸಮಯ ಕಾಯುವ ಸಮಸ್ಯೆ ದೂರವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಟಿಸಿಎಸ್‌ ಕಾರ್ಯನಿರ್ವಹಣೆ ಹೇಗೆ?

‘ಸಿಗ್ನಲ್‌ ಬಳಿಯ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ದಟ್ಟಣೆ ಆಧರಿಸಿ ಹಸಿರು ದೀಪ ಬೆಳಗಿಸುವ ತಂತ್ರಜ್ಞಾನವೇ ಎಟಿಸಿಎಸ್‌. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ’ ಎಂದು ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ವೃತ್ತಗಳಿಗೆ ಹೊಂದಿಕೊಂಡಿರುವ ಎಲ್ಲ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ದಟ್ಟಣೆಯನ್ನು ಕ್ಯಾಮೆರಾಗಳ ಮೂಲಕ ಎಟಿಸಿಎಸ್‌ ವ್ಯವಸ್ಥೆ ಗ್ರಹಿಸಲಿದೆ. ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳು ಇವೆಯೋ ಅಂಥ ಮಾರ್ಗದ ‘ಹಸಿರು’ ಸಿಗ್ನಲ್‌ ನೀಡಿ ಮುಂದಕ್ಕೆ ಕಳುಹಿಸಲಿದೆ. ನಿಗದಿತ ಸಮಯಕ್ಕೂ ಮೊದಲೇ ರಸ್ತೆ ಖಾಲಿಯಾದರೆ ‘ಕೆಂಪು’ ಸಿಗ್ನಲ್‌ ನೀಡಿ ಬೇರೆ ರಸ್ತೆಯಲ್ಲಿರುವ ವಾಹನಗಳ ಸಂಚಾರಕ್ಕೆ ‘ಹಸಿರು’ ಸಿಗ್ನಲ್‌ ನೀಡಲಿದೆ’ ಎಂದರು. ‘ಕೇವಲ ಒಂದೇ ವೃತ್ತದ ವಾಹನಗಳ ದಟ್ಟಣೆಯನ್ನು ಈ ವ್ಯವಸ್ಥೆ ಅಳೆಯುವುದಿಲ್ಲ. ಬದಲಿಗೆ ಅಕ್ಕ–ಪಕ್ಕದಲ್ಲಿರುವ ವೃತ್ತಗಳ ವಾಹನ ದಟ್ಟಣೆಯನ್ನೂ ಗ್ರಹಿಸಲಿದೆ. ಒಂದು ವೃತ್ತದ ದಟ್ಟಣೆಯಿಂದ ಮತ್ತೊಂದು ವೃತ್ತದ ದಟ್ಟಣೆ ಹೆಚ್ಚಾಗದಂತೆ ಸಿಗ್ನಲ್‌ಗಳ ನಿರ್ವಹಣೆ ಮಾಡಲಿದೆ. ಹೀಗಾಗಿ ದಟ್ಟಣೆ ನಿಯಂತ್ರಣಕ್ಕೆ ಬರುವ ಭರವಸೆ ಇದೆ’ ಎಂದು ಹೇಳಿದರು.

ಜನರು ಏನಂತಾರೆ... ?

ಹಳೆಯ ವ್ಯವಸ್ಥೆಯಡಿ ಸಿಗ್ನಲ್‌ಗಳಲ್ಲಿ ನಿಗದಿಪಡಿಸಿದ ಸಮಯದವರೆಗೂ ಕಾಯಬೇಕು. ಆದರೆ ಎಐ ಆಧಾರಿತ ಸಿಗ್ನಲ್‌ಗಳನ್ನು ಅಳವಡಿಕೆ ಮಾಡಿರುವುದರಿಂದ ಕಾಯುವ ಸಮಯ ಉಳಿತಾಯವಾಗುತ್ತದೆ. ಸಂಚಾರ ದಟ್ಟಣೆಗೆ ಕಡಿವಾಣ ಬೀಳುವ ಭರವಸೆ ಇದೆ.
ಪ್ರೀತಿ ಉತ್ತರಹಳ್ಳಿ
ಬಸವನಗುಡಿ ಕೆ.ಆರ್. ಮಾರುಕಟ್ಟೆ ಕಿಮ್ಸ್ ವೃತ್ತಗಳಲ್ಲಿ ಹೊಸ ಸಿಗ್ನಲ್‌ಗಳ ಅಳವಡಿಕೆಯಿಂದ ಸಂಚಾರ ನಿರ್ವಹಣೆ ಸುಗಮವಾಗಿ ನಡೆಯುತ್ತಿದೆ.
ಶಿವಾ ಆಟೊ ಚಾಲಕ
ನಗರದ ದಟ್ಟಣೆಗೆ ಪರಿಹಾರ ಒದಗಿಸುವ ಪರ್ಯಾಯ ವ್ಯವಸ್ಥೆಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು. ಈಗ ಎಐ ಆಧಾರಿತ ಈ ತಂತ್ರಜ್ಞಾನದಿಂದ ಸಮಸ್ಯೆಗೆ ಪರಿಹಾರ ಸಿಗುವ ಭರವಸೆ ಮೂಡಿದೆ.
ದೀಪಕ್‌ ಐಟಿ ಉದ್ಯೋಗಿ
ವಾಹನಗಳ ದಟ್ಟಣೆ ಆಧರಿಸಿ ಸ್ವಯಂಚಾಲಿತ ಸಿಗ್ನಲ್ ನಿರ್ವಹಣೆ ತಂತ್ರಜ್ಞಾನ ವಿಎಸಿ ಸಿಗ್ನಲ್‌ಗಳಲ್ಲಿದೆ. ಇದರಿಂದ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ರಾಜೇಶ್ ದ್ವಿಚಕ್ರ ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.