ಬೆಂಗಳೂರು: ದಾಖಲಾತಿ ಕೊರತೆಯಿಂದ ಮುಚ್ಚಿರುವ ಅನುದಾನಿತ ಶಾಲೆಗಳು ಬಹುತೇಕ ಶಾಶ್ವತವಾಗಿ ಬಾಗಿಲು ಹಾಕುವ ಸೂಚನೆ, ಸರ್ಕಾರದ ಜ್ಞಾಪನಾ ಪತ್ರವೊಂದರಿಂದ ಗೊತ್ತಾಗಿದೆ.
‘ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 23 ಶಾಲೆಗಳಲ್ಲಿ ಹಾಜರಾತಿ ಕೊರತೆಯಿಂದಾಗಿ ಅನುದಾನಿತ ಶಾಲೆಗಳು ಮುಚ್ಚಿದ್ದು, ಅಲ್ಲಿನ ಶಿಕ್ಷಕರನ್ನು ಬೇರೆಡೆಗೆ ನಿಯೋಜಿಸಿಲ್ಲ. ಆದರೆ ವೇತನ ಮಾತ್ರ ಯಥಾಪ್ರಕಾರ ಸಂದಾಯವಾಗುತ್ತಿದೆ. ಸರ್ಕಾರದ ನಿಯಮಗಳನ್ನು ಪಾಲಿಸದೆ ಇರುವುದು ಏಕಾಗಿ?’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಡಿಡಿಪಿಐಗೆ ನೆನಪೋಲೆ ಬರೆದಿದ್ದಾರೆ.
‘ದಾಖಲಾತಿ ಇಲ್ಲದೆ ಮುಚ್ಚಿರುವ ಶಾಲೆಗಳನ್ನು ಕಾರ್ಯಸಾಧುವಲ್ಲದ ಶಾಲೆಗಳೆಂದು ಪರಿಗಣಿಸಿ ಕರ್ತವ್ಯ ನಿರತ ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ಅಗತ್ಯವಿರುವ ಶಾಲೆಗಳಿಗೆ ಮರುಹಂಚಿಕೆ ಮಾಡಬೇಕು. ಈ ನಿಯಮ ಪಾಲಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಡಿಪಿಐ ಅವರಿಗೇ ಎಚ್ಚರಿಕೆ ನೀಡಲಾಗಿದೆ.
‘ಇದು ಹೊಸ ಸೂಚನೆಯೇನಲ್ಲ, ಈಗಾಗಲೇ ಇರುವ ಸೂಚನೆಯನ್ನು ನಿರ್ದೇಶಕರು ಮತ್ತೆ ನೆನಪಿಸಿದ್ದಾರೆ ಅಷ್ಟೇ. ಮುಚ್ಚುವುದಿದ್ದರೂ, ಮತ್ತೆ ತೆರೆಯುವುದಿದ್ದರೂ ಸರ್ಕಾರದ ಅನುಮತಿ ಪಡೆಯಲೇಬೇಕು. ಒಂದು ಬಾರಿ ಮುಚ್ಚಿದ ಶಾಲೆಯನ್ನು ಮತ್ತೆ ತೆರೆಯುವುದು ಕಷ್ಟಕರವಾಗಬಹುದು, ಇಬ್ಬರೋ, ಮೂವರೋ ವಿದ್ಯಾರ್ಥಿಗಳು ಸೇರ್ಪಡೆಯಾದರೆ ಅಂತಹ ಶಾಲೆಗಳನ್ನು ಮತ್ತೆ ತೆರೆಯುವ ಸಾಧ್ಯತೆ ಇಲ್ಲವೇ ಇಲ್ಲ. ಇದು ಕೇವಲ ಬೆಂಗಳೂರು ಉತ್ತರ ಜಿಲ್ಲೆಗಷ್ಟೇ ಅನ್ವಯವಾಗುವ ವಿಚಾರವಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಈ ಬಗ್ಗೆ ನಿರ್ದೆಶಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.