ಬೆಂಗಳೂರು: ಎಫ್‌ಎಂ ರೈನ್‌ಬೋ (101.3) ಕನ್ನಡ ಕಾಮನಬಿಲ್ಲು ಚಾನೆಲ್ ಪ್ರಸಾರಕ್ಕೆ ಅಡ್ಡಿಪಡಿಸದಂತೆ ಕೇಂದ್ರ ಸರ್ಕಾರಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿದ್ದಾರೆ. ಎಫ್‌ಎಂ ರೈನ್‌ಬೋ ಚಾನೆಲ್‌ಗೆ ಹೆಚ್ಚಿನ ಕೇಳುಗರಿಲ್ಲ ಎಂಬ ಕಾರಣ ನೀಡಿ, ಮೀಡಿಯಂ ವೇವ್ ಜತೆಗೆ ವಿಲೀನ ಮಾಡಲು ಪ್ರಸಾರ ಭಾರತಿ ಮುಂದಾಗಿದೆ.
‘ರಾಜ್ಯದಲ್ಲಿ ಲಕ್ಷಾಂತರ ಶ್ರೋತೃಗಳನ್ನು ಹೊಂದಿರುವ ಎಫ್‌ಎಂ ರೈನ್‌ಬೋ ಚಾನೆಲ್ ಅನ್ನು ಪ್ರಸಾರ ಭಾರತಿ ಮುಚ್ಚಲು ಮುಂದಾಗಿದೆ. ಇದು ಕನ್ನಡಿಗರಿಗೆ ಆಘಾತವನ್ನುಂಟು ಮಾಡಿದೆ. ಈ ಚಾನೆಲ್‌ಗೆ ರಾಜ್ಯದಲ್ಲಿ ಮಾತ್ರವಲ್ಲದೆ, ಪ್ರಪಂಚದಾದ್ಯಂತ 30 ಲಕ್ಷ ಕೇಳುಗರನ್ನು ಹೊಂದಿದೆ. ವಿಶೇಷವಾಗಿ ಬೆಂಗಳೂರಿಗರಿಗೆ ಈ ಚಾನಲ್ ಮೇಲೆ ಭಾವನಾತ್ಮಕ ಸಂಬಂಧವಿದೆ. ಹಿಂದಿ ಚಾನೆಲ್‌ಗಳನ್ನು ಪ್ರೋತ್ಸಾಹಿಸಿ, ಪ್ರಾದೇಶಿಕ ಭಾಷೆಗಳ ಚಾನೆಲ್‌ಗಳನ್ನು ಕಡೆಗಣಿಸುತ್ತಿರುವುದು ಬೇಸರವನ್ನುಂಟು ಮಾಡಿದೆ’ ಎಂದು ಹೇಳಿದ್ದಾರೆ.
‘ಎಫ್‌ಎಂ ರೈನ್‌ಬೋ (101.3) ಕನ್ನಡ ಕಾಮನಬಿಲ್ಲು ಚಾನೆಲ್ ಮುಚ್ಚಲು ಅವಕಾಶ ನೀಡಬಾರದು. ಈ ಬಗ್ಗೆ ಕ್ರಮವಹಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.