ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ 5ರವರೆಗೆ ನಡೆಯಲಿರುವ ಏರ್ ಷೋ ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯಲಿದೆ. ಸೂರ್ಯ ಕಿರಣ್ ಏರೊಬ್ಯಾಟಿಕ್ ಮತ್ತು ಸಾರಂಗ್ ಹೆಲಿಕಾಪ್ಟರ್‌ಗಳ ತಂಡಗಳು ಏಕಕಾಲಕ್ಕೆ ಪ್ರದರ್ಶನ ನೀಡಲಿವೆ. ಈವರೆಗೆ ಈ ತಂಡಗಳು ಪ್ರತ್ಯೇಕವಾಗಿ ಪ್ರದರ್ಶನ ನೀಡುತ್ತಿದ್ದವು.
‘ಕೋವಿಡ್ ಬಿಕ್ಕಟ್ಟಿನ ನಂತರ ನಡೆಯುತ್ತಿರುವ ಮೊದಲ ಏರ್‌ಷೋ ಇದು. ಈ 13ನೇ ಆವೃತ್ತಿಯಲ್ಲಿ ವಾಯುಪಡೆಯ ಬೋಯಿಂಗ್ ಚಿನೂಕ್‌ನಂತಹ ಹೆಲಿಕಾಪ್ಟರ್‌ಗಳು ಮತ್ತು ಎಎಚ್–64 ಅಪಾಚೆಯಂತಹ ಯುದ್ಧಹೆಲಿಕಾಪ್ಟರ್‌ಗಳು ಮೊದಲ ಬಾರಿಗೆ ಪ್ರದರ್ಶನ ನೀಡುವ ಸಾಧ್ಯತೆ ಇದೆ’ ಎಂದು ಯಲಹಂಕ ನೌಕಾಪಡೆ ಕೇಂದ್ರದ ಕಮಾಂಡಿಂಗ್ ಆಫೀಸರ್ ಏರ್ ಕಮಾಂಡರ್ ಶೈಲೇಂದ್ರ ಸೂದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
3000 ಸಾರ್ವಜನಿಕರಿಗೆ ಅವಕಾಶ:
‘ಕೋವಿಡ್ ಕಾರಣದಿಂದ ಈ ಬಾರಿ ವೀಕ್ಷಣೆಗೆ ಬರುವವರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. 12 ಸಾವಿರ ಪ್ರದರ್ಶಕರು ಮತ್ತು 3 ಸಾವಿರ ಸಾರ್ವಜನಿಕರು ಸೇರಿ ದಿನಕ್ಕೆ ಒಟ್ಟು 15 ಸಾವಿರ ಜನರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ. ಸಾರ್ವಜನಿಕರು ಆನ್‌ಲೈನ್‌ನಲ್ಲಿಯೂ ಪ್ರದರ್ಶನ ವೀಕ್ಷಿಸಬಹುದು. ಇದಕ್ಕಾಗಿ ಏರೋ ಇಂಡಿಯಾ-2021 ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು’ ಎಂದರು.
‘ವಾಯುಪಡೆ ಸಿಬ್ಬಂದಿ ಮತ್ತು ಪತ್ರಕರ್ತರು ಸೇರಿದಂತೆ ಎಲ್ಲರಿಗೂ ಆರ್‌ಟಿ ಪಿಸಿಆರ್ ಪರೀಕ್ಷೆ ಕಡ್ಡಾಯ. ಪ್ರದರ್ಶನಕ್ಕೆ ಬರುವ 72 ತಾಸು ಮೊದಲೇ ಪರೀಕ್ಷೆ ಮಾಡಿಸಿರಬೇಕು. ನೆಗೆಟಿವ್ ವರದಿ ಇರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು’ ಎಂದೂ ಅವರು ಹೇಳಿದರು.
ಸಾಮಾನ್ಯವಾಗಿ ಐದು ದಿನಗಳು ನಡೆಯುತ್ತಿದ್ದ ಏರ್ ಷೋ ಈ ಬಾರಿ ಮೂರು ದಿನಗಳಿಗೆ ಸೀಮಿತಗೊಂಡಿದೆ.
ತುರ್ತು ವೈದ್ಯಕೀಯ ತಂಡ:
‘ನಾಲ್ಕು ತುರ್ತು ವೈದ್ಯಕೀಯ ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ 26 ವೈದ್ಯರು, 46 ವೈದ್ಯಕೀಯ ಸಿಬ್ಬಂದಿ, 5 ಆ್ಯಂಬುನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಜತೆಗೆ 14 ಸರ್ಕಾರಿ ಮತ್ತು 48 ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಹೆಲಿಕಾಪ್ಟರ್‌ಗಳನ್ನೂ ಇದಕ್ಕಾಗಿ ಮೀಸಲಿಡಲಾಗಿದೆ’ ಎಂದರು.
541 ಪ್ರದರ್ಶಕರು:
ಈವರೆಗೆ ಒಟ್ಟು 541 ಪ್ರದರ್ಶಕರು ಈವರೆಗೆ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 78 ಅಂತರರಾಷ್ಟ್ರೀಯ ಪ್ರದರ್ಶಕರೂ ಇದ್ದಾರೆ. 143 ಪ್ರದರ್ಶಕರು ವರ್ಚುವಲ್ ರೂಪದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ರಕ್ಷಣಾ ಇಲಾಖೆ ಹೇಳಿದೆ.
ಸಾರ್ವಜನಿಕರ ಪೈಕಿ ಈವರೆಗೆ ಶೇ 95ರಷ್ಟು ಜನ ನೋಂದಣಿ ಮಾಡಿಸಿದ್ದಾರೆ. ಈಗಲೂ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. https://aeroindia.gov.in/ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಏರ್ ಷೋ ಸಮಯ
ಫೆ.3ರಂದು ಉದ್ಘಾಟನಾ ಕಾರ್ಯಕ್ರಮದ ನಂತರ, ಅಂದರೆ ಮಧ್ಯಾಹ್ನ 1ರ ನಂತರ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ.
ಫೆ.4 ಮತ್ತು 5ರಂದು: ಬೆಳಿಗ್ಗೆ 9ರಿಂದ 12,ಮಧ್ಯಾಹ್ನ 2ರಿಂದ 5
ಟಿಕೆಟ್ ದರ
ಇ–ಟಿಕೆಟ್ ದರ ದಿನಕ್ಕೆ ₹500
ಬಿಸಿನೆಸ್ ವಿಸಿಟರ್ ಅರ್ಧದಿನಕ್ಕೆ –₹2,500
ಕನಿಷ್ಠ 74 ವಿಮಾನಗಳ ಪ್ರದರ್ಶನ
ಎಂಐ–17ವಿ5, ಎಎಲ್‌ಎಚ್, ಎಲ್‌ಸಿಚ್, ಎಲ್‌ಯುಚ್, ಸಿ–17 ಗ್ಲೋಬ್‌ಮಾಸ್ಟರ್, ಎಂಬ್ರಯರ್, ಅಂಟೊನೊವ್ ಎಎನ್–32, ಜಾಗ್ವಾರ್, ಹಾಕ್, ಸುಖೋಯ್ ಎಸ್‌ಯು–30, ತೇಜಸ್, ರಫೇಲ್ ಸೇರಿದಂತೆ 41 ಯುದ್ಧವಿಮಾನಗಳು ಉದ್ಘಾಟನೆ ವೇಳೆ ಪ್ರದರ್ಶನ ನೀಡಲಿವೆ. ಈ ವಿಮಾನಗಳು ಭಾರತೀಯ ವಾಯುಪಡೆ, ನೌಕಾಪಡೆ ಹಾಗೂ ಸೇನಾಪಡೆ ಮತ್ತು ಎಚ್‌ಎಲ್ ಹಾಗೂ ಕರಾವಳಿ ಪಡೆಗೆ ಸೇರಿದವುಗಳಾಗಿವೆ.
ಉದ್ಘಾಟನೆಯ ನಂತರ, ಒಟ್ಟು 42 ವಿಮಾನಗಳು ಉಳಿದ ಎರಡು ದಿನ ಪ್ರದರ್ಶನ ನೀಡಲಿವೆ. 1940ರ ದಶಕದ ಸಿ–47 ವಿಮಾನವೂ ಪ್ರದರ್ಶನಕ್ಕೆ ಸಜ್ಜಾಗಿದೆ. ಅಂತರರಾಷ್ಟ್ರೀಯ ಮಟ್ಟದ 11 ವಿಮಾನಗಳೂ ಪ್ರದರ್ಶನಕ್ಕೆ ಬರುವ ನಿರೀಕ್ಷೆ ಇದ್ದು, ಅವುಗಳ ಹೆಸರು ಇನ್ನೂ ಅಂತಿಮವಾಗಿಲ್ಲ ಎಂದು ಶೈಲೇಂದ್ರ ಸೂದ್ ಹೇಳಿದರು.
ಯುದ್ಧವಿಮಾನಗಳೊಂದಿಗೆ, ದೇಶದ 21 ನಾಗರಿಕ ವಿಮಾನಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟಾರೆ, 74 ವಿಮಾನಗಳು ಈ ಬಾರಿ ಪ್ರದರ್ಶನ ನೀಡಲಿವೆ. 2019ರಲ್ಲಿ 61 ವಿಮಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು ಎಂದರು.
ಅಗ್ನಿ ಅವಘಡ: ಸಕಲ ಮುನ್ನೆಚ್ಚರಿಕೆ
2019ರ ಏರ್ ಷೋ ಸಂದರ್ಭದಲ್ಲಿ ವಾಹನ ನಿಲುಗಡೆ ಸ್ಥಳದಲ್ಲಿ ಬೆಂಕಿ ತಗುಲಿ ಕಾರುಗಳು ಹೊತ್ತಿ ಉರಿದ ಘಟನೆ ಹಿನ್ನೆಲೆಯಲ್ಲಿ, ಈ ಬಾರಿಯ ಏರ್ ಷೋ ವೇಳೆ ಸಕಲ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿದೆ.
ವಾಹನ ನಿಲುಗಡೆ ಪ್ರದೇಶದಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ವಾಹನ ನಿಲುಗಡೆ ಮತ್ತು ವಿಮಾನ ಪ್ರದರ್ಶನದ ಸ್ಥಳವನ್ನು ಸಂಪೂರ್ಣ ಹುಲ್ಲು ರಹಿತಗೊಳಿಸಲಾಗಿದೆ. ಅಗ್ನಿ ಅವಘಡ ಸಂದರ್ಭದಲ್ಲಿ ಕಾರ್ಯನಿರ್ವಹಿಸಲೆಂದೇ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುತ್ತಿದೆ.
ಎನ್‌ಡಿಆರ್‌ಎಫ್, ಆರ್‌ಎಎಫ್, ಸಿಆರ್‌ಪಿಎಫ್ ಹಾಗೂ ಬಾಂಬ್ ನಿಷ್ಕ್ರಿಯ ದಳ, ಬಾಂಬ್ ಪತ್ತೆ ದಳದ ತಂಡಗಳು ಈ ಕಾರ್ಯಕ್ಕೆ ನಿಯೋಜನೆಗೊಳ್ಳಲಿವೆ.
ಬಾಂಬ್ ದಾಳಿ ಸಾಧ್ಯತೆ, ವಿಮಾನ ಪತನ, ಕಾಲ್ತುಳಿತ, ಡ್ರೋನ್ ದಾಳಿಯಂತಹ ತುರ್ತು ಸಂದರ್ಭಗಳನ್ನು ಎದುರಿಸಲೂ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದೆಲ್ಲದರ ನಿರ್ವಹಣೆಗಾಗಿ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ.
ರಕ್ಷಣಾ ಇಲಾಖೆ, ವಾಯುಪಡೆ ಮತ್ತು ರಾಜ್ಯಸರ್ಕಾರದ ಇಲಾಖೆಗಳ ನಡುವೆ ಸಂವಹನಕ್ಕಾಗಿ ರಾಜ್ಯಪ್ರಕೃತಿ ವಿಕೋಪಗಳ ನಿಯಂತ್ರಣ ಇಲಾಖೆಯು ಸಾಮಾನ್ಯ ‘ಗ್ರಿಡ್ ಮ್ಯಾಪ್’ ಕೂಡ ರೂಪಿಸಿದೆ.
ಬೆಂಕಿ ಮತ್ತಿತರ ಅವಘಡಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗೆ ತರಬೇತಿ ಮತ್ತು ಅಣಕು ಪ್ರದರ್ಶನವನ್ನು ಇದೇ ಮೊದಲ ಬಾರಿಗೆ ಆಯೋಜಿಸಿದ್ದು, ಜನವರಿ 30ರಿಂದ ಈ ಪ್ರಕ್ರಿಯೆ ನಡೆಯಲಿದೆ.
ಡ್ರೋನ್ ಹಾರಾಟಕ್ಕೆ ನಿರ್ಬಂಧ
ಏರ್ ಷೋ ಹಿನ್ನೆಲೆಯಲ್ಲಿ ಜ. 24ರಿಂದ ಫೆ. 5ರವರೆಗೆ ಯಲಹಂಕ ವಾಯುನೆಲೆ ಸುತ್ತಲಿನ ಪ್ರದೇಶದಲ್ಲಿ ಡ್ರೋನ್ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
ಹದ್ದು, ಕಾಗೆ ಮತ್ತಿತರ ಪಕ್ಷಿಗಳ ಹಾರಾಟದಿಂದ ವಿಮಾನಗಳ ಪ್ರದರ್ಶನಕ್ಕೆ ಅಡ್ಡಿ ಉಂಟಾಗುವ ಕಾರಣದಿಂದ ವಾಯುನೆಲೆ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ ಮಾಂಸ ಮತ್ತು ಮೀನು ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಫೆ. 7ರವರೆಗೂ ಈ ನಿಯಮ ಜಾರಿಯಲ್ಲಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.