ಬೆಂಗಳೂರು: ಕೆಂಪೇಗೌಡಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಿರ್ಮಿಸಲಾಗುತ್ತಿರುವ ಎರಡನೇ ರನ್‌ವೇಯಲ್ಲಿ ಮಂಗಳವಾರ ಮೂರು ವಿಮಾನಗಳು ಪರೀಕ್ಷಾರ್ಥ ಹಾರಾಟ ನಡೆಸಿದವು.
ನಿಲ್ದಾಣದಲ್ಲಿರುವ ಒಂದನೇ ರನ್‌ವೇನಲ್ಲಿ ಸದ್ಯ ವಿಮಾನಗಳ ಹಾರಾಟದ ದಟ್ಟಣೆ ಹೆಚ್ಚಿದೆ. ಅದನ್ನು ತಗ್ಗಿಸುವ ಉದ್ದೇಶದಿಂದ ಎರಡನೇ ರನ್‌ವೇ ನಿರ್ಮಿಸಲಾಗುತ್ತಿದ್ದು, ಅದರ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ರನ್‌ವೇ ಸಾಮರ್ಥ್ಯ ಪರೀಕ್ಷಿಸಲೆಂದು ಇಂಡಿಗೊ, ಸ್ಪೈಸ್ ಜೆಟ್ ಹಾಗೂ ಏರ್ ಏಷ್ಯಾ ಕಂಪನಿಯ ವಿಮಾನಗಳು ಹಾರಾಟ ನಡೆಸಿದವು. ಅವುಗಳ ಟೇಕಾಫ್ ಹಾಗೂ ಲ್ಯಾಂಡಿಂಗ್ ಯಶಸ್ವಿ ಆಯಿತು.
‘ರನ್‌ವೇ ನಿರ್ಮಾಣ ಕೆಲಸ ತ್ವರಿತಗತಿಯಲ್ಲಿ ಸಾಗಿದೆ. ವಿಮಾನಗಳ ಪರೀಕ್ಷಾರ್ಥ ಹಾರಾಟಕ್ಕೂ ರನ್‌ವೇ ಸ್ಪಂದಿಸಿದೆ. ಕೆಲ ಸುಧಾರಣೆಗಳನ್ನು ಮಾಡಿ, ಎಲ್ಲ ವಿಮಾನಗಳ ಕಾರ್ಯಾಚರಣೆಗೆರನ್‌ವೇ ಅನ್ನು ಡಿಸೆಂಬರ್ 5ರಿಂದ ಮುಕ್ತಗೊಳಿಸಲಾಗುವುದು’ ಎಂದು ನಿಲ್ದಾಣದ ಪ್ರತಿನಿಧಿ ಹೇಳಿದರು.
’4 ಕಿ.ಮೀ ಉದ್ದ ಹಾಗೂ 45 ಮೀಟರ್ ಅಗಲವಿರುವ ಈ ರನ್‌ವೇ, ಒಂದು ಹಾಗೂ ಎರಡನೇ ಟರ್ಮಿನಲ್‌ಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ತೀರಾ ಕಡಿಮೆಯಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.