ಬೆಂಗಳೂರು: ‘ಕಾರ್ಮಿಕ ವರ್ಗ ಹಲವು ವರ್ಷಗಳ ಹೋರಾಟದಿಂದ ಗಳಿಸಿರುವ ಹಕ್ಕುಗಳ ಮೇಲೆ ಫ್ಯಾಸಿಸ್ಟ್ ಸರ್ಕಾರ ದಾಳಿ ಮಾಡುತ್ತಿದ್ದು, ದುಡಿಯುವ ಜನರ ಹಕ್ಕುಗಳಿಗಾಗಿ ಕಾರ್ಮಿಕರು ಹೋರಾಟ ನಡೆಸಬೇಕಿದೆ’ ಎಂದು ಎಐಟಿಯುಸಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ತಿಳಿಸಿದರು.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಐಟಿಯುಸಿ ಶತಮಾನೋತ್ಸವ ಹಾಗೂ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಹಕ್ಕುಗಳ ರಕ್ಷಣೆಗಾಗಿ ರೈತ–ಕಾರ್ಮಿಕರ ಐಕ್ಯಗೊಳ್ಳುವುದು ಅವಶ್ಯಕ’ ಎಂದರು.
ಹೊಸತು ಪತ್ರಿಕೆಯ ಸಂಪಾದಕ ಸಿದ್ದನಗೌಡ ಪಾಟೀಲ, ‘ಕಾರ್ಮಿಕರ ಹಕ್ಕುಗಳನ್ನು ಉಳಿಸಬೇಕಾದರೆ ಕಾರ್ಮಿಕ ವರ್ಗ ತನ್ನ ಚಾರಿತ್ರಿಕ ರಾಜಕೀಯ ಜವಾಬ್ದಾರಿಯನ್ನು ಮೊದಲು ಅರ್ಥ ಮಾಡಿಕೊಂಡು, ಇಂದಿನ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು’ ಎಂದರು.
ಎಐಟಿಯುಸಿ ಕಾರ್ಯಾಧ್ಯಕ್ಷ ಎಚ್.ಮಹದೇವನ್, ‘ಕಾರ್ಮಿಕ ವರ್ಗ ಇಂದು ಅತ್ಯಂತ ಸವಾಲಿನ ಸಂದರ್ಭವನ್ನು ಎದುರಿಸುತ್ತಿದೆ. ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಇನ್ನೂ ಬಲವಾದ ಹೋರಾಟ ರೂಪುಗೊಳ್ಳಬೇಕು’ ಎಂದು ಹೇಳಿದರು.
ಕಾರ್ಮಿಕ ಮುಖಂಡ ಮರಿಲಿಂಗಯ್ಯ ಅವರು ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು.
ಬಿಡಿಎ ವಸತಿ ಯೋಜನೆಗಳಲ್ಲಿ ಕಾರ್ಮಿಕರಿಗೆ ಮೀಸಲಾತಿ, ಎಲ್ಲರಿಗೂ ಕೋವಿಡ್ ಉಚಿತ ಲಸಿಕೆಗೆ ಆಗ್ರಹ, ತೈಲ ಬೆಲೆ ಏರಿಕೆ ವಿರುದ್ಧ, ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ರೈತರ ಹೋರಾಟಕ್ಕೆ ಬೆಂಬಲ ನೀಡುವನಿರ್ಣಯಗಳನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.