ADVERTISEMENT

ಇದೇ 30ರಿಂದ ಅಕ್ಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 15:20 IST
Last Updated 27 ಆಗಸ್ಟ್ 2024, 15:20 IST
ಅಕ್ಕ ಲೋಗೊ
ಅಕ್ಕ ಲೋಗೊ   

ಬೆಂಗಳೂರು: ಅಮೆರಿಕಾ ಕನ್ನಡ ಕೂಟಗಳ ಆಗರವು (ಅಕ್ಕ) ಇದೇ 30ರಿಂದ ಸೆಪ್ಟೆಂಬರ್‌ 1ರವರೆಗೆ ಅಮೆರಿಕದ ವರ್ಜೀನಿಯಾದ ರಿಚ್‌ಮಂಡ್‌ ನಗರದಲ್ಲಿ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ ಹಮ್ಮಿಕೊಂಡಿದೆ. ‌

‘ಅಮೆರಿಕದಲ್ಲಿನ 50ಕ್ಕೂ ಅಧಿಕ ಕನ್ನಡ ಸಂಘಗಳು ಸೇರಿ ಈ ಸಮ್ಮೇಳನ ಆಯೋಜಿಸುತ್ತಿವೆ. ಎರಡು ವರ್ಷಗಳಿಗೊಮ್ಮೆ ನಡೆಯಬೇಕಾದ ಈ ಸಮ್ಮೇಳನ, ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು. ಸಮ್ಮೇಳನಕ್ಕೆ ಭರದಿಂದ ಸಿದ್ಧತೆ ನಡೆದಿದ್ದು, ಈಗಾಗಲೇ ಆರು ಸಾವಿರಕ್ಕೂ ಅಧಿಕ ಕನ್ನಡಿಗರು ನೋಂದಾಯಿಸಿಕೊಂಡಿದ್ದಾರೆ. ಮೂರು ದಿನಗಳು ರಿಚ್‌ಮಂಡ್‌ ನಗರದಲ್ಲಿ ಕನ್ನಡ ಡಿಂಡಿಮಿಸಲಿದೆ’ ಎಂದು ಅಕ್ಕದ ಅಧ್ಯಕ್ಷ ರವಿ ಬೋರೇಗೌಡ ತಿಳಿಸಿದ್ದಾರೆ. 

‘ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಫ್ಯಾಶನ್‌ ಶೋ, ಸಾಹಿತ್ಯ ಗೋಷ್ಠಿ, ಬಿಸಿನೆಸ್‌ ಫೋರಂ, ನಾಡಿನ ವಿಶಿಷ್ಟ ಖಾದ್ಯಗಳ ಭೋಜನ, ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ನಮನ ಸಲ್ಲಿಸುವ ಸಂಗೀತ ಸಂಜೆ, ನಾಡಿನ ಪಾರಂಪರಿಕ ನೃತ್ಯ ಶೈಲಿಗಳಾದ ಡೊಳ್ಳು ಕುಣಿತ, ಯಕ್ಷಗಾನ ಪ್ರದರ್ಶನ, ಕನ್ನಡ ನಾಟಕಗಳ ಪ್ರದರ್ಶನ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಒಕ್ಕೂಟ ಆಯೋಜಿಸಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಸಮ್ಮೇಳನಕ್ಕೆ ರಾಜ್ಯದಿಂದ ವಿಶೇಷ ಆಹ್ವಾನಿತರಾಗಿ ನಿರ್ಮಲಾನಂದನಾಥ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.