ಬೆಂಗಳೂರು: ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಜಯನಗರದ ಮಳಿಗೆಯೊಂದರಲ್ಲಿ ಬ್ರಿಟನ್‌ನ ಪ್ರಥಮ ಮಹಿಳೆಯೂ ಆಗಿರುವ ಮಗಳು ಅಕ್ಷತಾ ಮೂರ್ತಿ ಜತೆಗೆ ಐಸ್ ಕ್ರೀಂ ಸವಿದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅವರಿಬ್ಬರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿಯಾಗಿರುವ ಅಕ್ಷತಾ, ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾರೆ. ಅವರು ಫೆ.10ರಂದು ಸೇಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜಿನಲ್ಲಿ ಸಪ್ನ ಬುಕ್ ಆಯೋಜಿಸಿದ್ದ ‘ಆನ್ ಅನ್‌ಕಾಮನ್ ಲವ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು ಈ ಪುಸ್ತಕದ ಲೇಖಕರಾಗಿದ್ದು, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಕುರಿತ ಪುಸ್ತಕ ಇದಾಗಿದೆ. ಇದರಿಂದಾಗಿ ಮಕ್ಕಳು ಹಾಗೂ ಪಾಲಕರ ಜತೆಗೆ ಅಕ್ಷತಾ ಭಾಗವಹಿಸಿದ್ದರು.
ನಾರಾಯಣ ಮೂರ್ತಿ ಅವರ ಜತೆಗೆ ಅಕ್ಷತಾ ಅವರು ಜಯನಗರದ ‘ಕಾರ್ನರ್ ಹೌಸ್’ ಮಳಿಗೆಯಲ್ಲಿ ಸೋಮವಾರ ಐಸ್ ಕ್ರೀಂ ಸವಿದಿದ್ದಾರೆ. ಅವರ ಫೋಟೋವನ್ನು ಹಲವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.