ಯಲಹಂಕ: ಹುಣಸಮಾರನಹಳ್ಳಿಯಲ್ಲಿರುವ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಘ ಸಹಕಾರಿ ನಿಯಮಿತದ ಅಭಿವೃದ್ಧಿ ಅಧಿಕಾರಿ ಎಂ.ಅನಿಲ್‌ಕುಮಾರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಆರ್.ರವಿಚಂದ್ರ, ‘ಸಹಕಾರಿ ಸಂಘದ ಚರಾಸ್ತಿ ₹14 ಕೋಟಿಗೂ ಮೀರಿ ಬೆಳೆಯುತ್ತಿದ್ದು, ಸಂಘದಲ್ಲಿ 2945 ಶೇರುದಾರರಿದ್ದಾರೆ. ಸುಮಾರು ₹15 ಕೋಟಿ ಠೇವಣಿ ಸಂಗ್ರಹವಾಗಿದೆ. ಇನ್ನೂ ಹೆಚ್ಚಿನ ಷೇರುದಾರರನ್ನು ಆಕರ್ಷಿಸಲು ವೈಯಕ್ತಿಕ, ವಾಹನ, ಪಿಗ್ಮಿ, ನಿಶ್ಚಿತ ಠೇವಣಿ ಸೇರಿ ಹಲವು ರೀತಿಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕಿರು ಹಣಕಾಸು ಸಾಲ, ಸ್ತ್ರೀಶಕ್ತಿ ಸಂಘ, ಬಡಮಹಿಳೆಯರಿಗೆ ಮತ್ತು ರಸ್ತೆ ವ್ಯಾಪಾರಿಗಳಿಗೆ ವಿಶೇಷ ಸಾಲಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ. ಆ ಮೂಲಕ ಕೇಂದ್ರ ಸರ್ಕಾರದ ‘ಸಬ್ ಕಾ ಸಾತ್-ಸಬ್ ಕಾ ವಿಕಾಸ್ʼ ಯೋಜನೆಗೆ ಪೂರಕವಾಗಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡಜನರ ಏಳಿಗೆಗಾಗಿ ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದರು.
ಸಂಘದ ಉಪಾಧ್ಯಕ್ಷೆ ಎ.ಎಂ.ಸುಜಾತ, ಕಾನೂನು ಸಲಹೆಗಾರ ಎ.ಸದಾನಂದ, ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಡಿ.ಎಸ್.ವೆಂಕಟಾಚಲಪತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ, ಎಚ್.ಪಿ.ನಾರಾಯಣಸ್ವಾಮಿ, ಹರೀಶ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.