ADVERTISEMENT

ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆಗೆ ವ್ಯವಸ್ಥೆ: ಅಕ್ಷಯ ಪಾತ್ರ ಅಡುಗೆ ಮನೆ ಆರಂಭ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 23:08 IST
Last Updated 30 ಸೆಪ್ಟೆಂಬರ್ 2024, 23:08 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಮುಖ್ಯರಸ್ತೆಯ ಚಿಕ್ಕಜಾಲ ಸಮೀಪದಲ್ಲಿ ಅಕ್ಷಯ ಪಾತ್ರ ಫೌಂಡೇಶನ್‌ ವತಿಯಿಂದ ಸ್ಥಾಪಿಸಿರುವ ಅತ್ಯಾಧುನಿಕ ಅಡುಗೆ ಮನೆಯ ಹೊರನೋಟ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಮುಖ್ಯರಸ್ತೆಯ ಚಿಕ್ಕಜಾಲ ಸಮೀಪದಲ್ಲಿ ಅಕ್ಷಯ ಪಾತ್ರ ಫೌಂಡೇಶನ್‌ ವತಿಯಿಂದ ಸ್ಥಾಪಿಸಿರುವ ಅತ್ಯಾಧುನಿಕ ಅಡುಗೆ ಮನೆಯ ಹೊರನೋಟ   

ಯಲಹಂಕ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಮುಖ್ಯ ರಸ್ತೆಯ ಚಿಕ್ಕಜಾಲ ಸಮೀಪದಲ್ಲಿ ಅಕ್ಷಯ ಪಾತ್ರ ಫೌಂಡೇಶನ್‌ ವತಿಯಿಂದ ಸ್ಥಾಪಿಸಿರುವ ನೂತನ ಹಾಗೂ ಅತ್ಯಾ ಧುನಿಕ ಅಡುಗೆ ಮನೆಯನ್ನು ಸೋಮ ವಾರ ಲೋಕಾರ್ಪಣೆಗೊಳಿಸಲಾಯಿತು.

ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಲು ಥಕ್ಕರ್‌ ಫ್ಯಾಮಿಲಿ ಫೌಂಡೇಶನ್‌ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಈ ನೂತನ ಅಡುಗೆ ಮನೆಯನ್ನು ಸ್ಥಾಪಿಸಲಾಗಿದೆ. ಅಕ್ಷಯಪಾತ್ರ ಫೌಂಡೇಷನ್‌ ದೇಶದಲ್ಲಿ ನಿರ್ಮಿಸಿರುವ 75ನೇ ಅಡುಗೆಮನೆ ಇದಾಗಿದೆ. ಇಲ್ಲಿಂದ ಜಕ್ಕೂರು, ಹೆಬ್ಬಾಳ ಸೇರಿ ಸುತ್ತಮುತ್ತಲ ಪ್ರದೇಶಗಳ 200  ಶಾಲೆಗಳ ಒಟ್ಟು 35 ಸಾವಿರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿದ್ದಾಗ 70 ಸಾವಿರ ಮಕ್ಕಳಿಗೆ ಊಟ ಒದಗಿಸುವ ಸಾಮರ್ಥ್ಯವನ್ನೂ ಈ ಕೇಂದ್ರ ಹೊಂದಿದೆ.

ಅಡುಗೆ ಮನೆ ಉದ್ಘಾಟಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ‘ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಯಲ್ಲಿ ಕರ್ನಾಟಕವು ದೇಶಕ್ಕೆ ಮಾದರಿಯಾಗಿದೆ. ಈ ವಿಚಾರದಲ್ಲಿ ದೇಶಕ್ಕೆ ಬೆಳಕು ಹರಿಸಿ, ಎಲ್ಲ ರಾಜ್ಯಗಳ ಕಣ್ಣು ತೆರೆಯುವಂತೆ ಮಾಡಿ ಸುಪ್ರೀಂ ಕೋರ್ಟಿನಿಂದಲೂ ಮೆಚ್ಚುಗೆ ಗಳಿಸಿದ್ದು ಕರ್ನಾಟಕ’ ಎಂದರು.

ADVERTISEMENT

ಇನ್ಫೋಸಿಸ್‌ ಲಿಮಿಟೆಡ್‌ನ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಮಾತನಾಡಿ, ‘ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುತ್ತಿ ರುವುದು ಅಕ್ಷಯ ಪಾತ್ರದ ಮಹತ್ತರ ಕಾರ್ಯವಾಗಿದೆ. ಈ ಅಡುಗೆಮನೆ ಸ್ಥಾಪನೆಗೆ ಸಹಯೋಗ ಒದಗಿಸಿದ ಥಕ್ಕರ್‌ ಕುಟುಂಬಕ್ಕೆ ಹಾಗೂ ಊಟ ಒದಗಿಸುವ ಯೋಜನೆಯ ಶೇ 55–56ರಷ್ಟು ಖರ್ಚು ಭರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ಅಕ್ಷಯ ಪಾತ್ರ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಮಧು ಪಂಡಿತ್‌ ದಾಸ ಮಾತನಾಡಿದರು. ದಾನಿಗಳಾದ ಥಕ್ಕರ್‌ ಫೌಂಡೇಶನ್‌ನ ಅಧ್ಯಕ್ಷ ಲಿಂಡಾ ಥಕ್ಕರ್‌, ರಿಲೆಯನ್ಸ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿಂದ್ರ ಥಕ್ಕರ್‌, ಅಕ್ಷಯ ಪಾತ್ರ ಫೌಂಡೇಶನ್‌ನ ಸಹ-ಸಂಸ್ಥಾಪಕ ಚಂಚಲಪತಿ ದಾಸ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಧರ್‌ ವೆಂಕಟ್‌, ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಕಾವೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.