ADVERTISEMENT

₹30 ಲಕ್ಷ ಲಂಚಕ್ಕೆ ಮುನಿರತ್ನ ಕಿರುಕುಳ: ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಆರೋಪ

ಶಾಸಕರಿಂದ ಜಾತಿ ನಿಂದನೆ, ಜೀವ ಬೆದರಿಕೆ: ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 16:16 IST
Last Updated 13 ಸೆಪ್ಟೆಂಬರ್ 2024, 16:16 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ‘ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮತ್ತು ಅವರ ಆಪ್ತ ವಸಂತ್‌ ಕುಮಾರ್‌ ಅವರು ₹30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಕಿರುಕುಳ ನೀಡುತ್ತಿದ್ದಾರೆ. ಹಣ ಕೊಡದಿದ್ದರೆ ನಿನ್ನನ್ನು ರೇಣುಕಸ್ವಾಮಿ ರೀತಿಯಲ್ಲಿ ಕೊಲೆ ಮಾಡುತ್ತೇವೆಂದು ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನಿರತ್ನ ಮತ್ತು ಅವರ ಬೆಂಬಲಿಗರು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಪರಿಶಿಷ್ಟ ಜಾತಿಯ ಮುಖಂಡರೊಬ್ಬರ ಹೆಸರು ಪ್ರಸ್ತಾಪಿಸಿ ಜಾತಿನಿಂದನೆಯ ರೀತಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೊ ತುಣುಕುಗಳನ್ನು ಬಿಡುಗಡೆ ಮಾಡಿದರು.

‘ರಾಜರಾಜೇಶ್ವರಿನಗರ ವಿಧಾನಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 42ರಲ್ಲಿ (ಲಕ್ಷ್ಮಿದೇವಿ ವಾರ್ಡ್‌) ಗಂಗಾ ಎಂಟರ್‌ಪ್ರೈಸಸ್‌ ಎಂಬ ಹೆಸರಿನಲ್ಲಿ ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದಿದ್ದೆ. ಡಿ. ದೇವರಾಜು ಅರಸು ಟ್ರಕ್‌ ಟರ್ಮಿನಲ್‌ ಪ್ರದೇಶದ ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ನಿರ್ವಹಣೆಯ ಕೆಲಸಗಳನ್ನೂ ನಾನು ಮಾಡುತ್ತಿದ್ದೇನೆ. ₹30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವ ಶಾಸಕರು, ಹಣ ಕೊಡಲಿಲ್ಲ ಎಂಬ ದ್ವೇಷದಿಂದ ಗುತ್ತಿಗೆ ರದ್ದುಗೊಳಿಸುವ ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ನನ್ನ ಹೆಂಡತಿ ಮತ್ತು ತಾಯಿ ಬಗ್ಗೆ ಅವಾಚ್ಯ ಪದಗಳಲ್ಲಿ ನಿಂದಿಸಿದ್ದಾರೆ. ನಿನ್ನ ಹೆಂಡತಿಯ ಫೋಟೊ ತೋರಿಸು ಹೇಗಿದ್ದಾಳೆ ಎನ್ನುತ್ತಾರೆ. ಮುಂದೆ ನಾನು‌ ಜೀವಂತವಾಗಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ’ ಎಂದು ಹೇಳಿದರು.

‘ನಾನು ಪೌರ ಕಾರ್ಮಿಕನಾಗಿ, ಲಾರಿ ಕ್ಲೀನರ್,‌ ಚಾಲಕ ಆಗಿ ಕೆಲಸ ಮಾಡಿ, ಈಗ ವಾರ್ಡ್ ಮಟ್ಟದ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಮುನಿರತ್ನ ಮತ್ತು ಅವರ ಆಪ್ತಸಹಾಯಕ ವಿ.ಜಿ. ಕುಮಾರ್ ನನಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಶಾಸಕರ ಗೃಹ ಕಚೇರಿಯಲ್ಲಿ ಸಭೆ ಕರೆದು ಎಲ್ಲರೆದುರು ನನ್ನನ್ನು ಅವಮಾನಿಸಿದ್ದಾರೆ. ₹30 ಲಕ್ಷದ ಬದಲಿಗೆ ನಾನು ₹15 ಲಕ್ಷ ಕೊಡುವೆ ಎಂದಿದ್ದೆ. ಆದರೆ ನನಗೆ ಆ ಹಣ ಹೊಂದಿಸಿ ಕೊಡುವುದಕ್ಕೆ ಆಗಲಿಲ್ಲ’ ಎಂದು ಅಳಲು ತೋಡಿಕೊಂಡರು.

‘ಮೂರು ದಿನಗಳ ಹಿಂದೆ ಮುನಿರತ್ನ ಅವರ ಆಪ್ತ ವಸಂತ್‌ ಕುಮಾರ್‌ ಎಂಬವರು ಪೆಟ್ರೋಲ್‌ ಬಂಕ್‌ವೊಂದರಲ್ಲಿ ಭೇಟಿಯಾಗಿ, ನೀನು ಶಾಸಕರಿಗೆ ಹಣ ಕೊಟ್ಟಿಲ್ಲ ಅಂದರೆ ರೇಣುಕಸ್ವಾಮಿಗೆ ಆದ ಗತಿಯೇ ನಿನಗೂ ಬರಲಿದೆ. ರೇಣುಕಸ್ವಾಮಿಯನ್ನು ಕೊಲೆ ಮಾಡಿದ್ದು ಶಾಸಕರ ತಂಗಿಯ ಮಗ ಎಂದು ನನಗೆ ಜೀವ ಬೆದರಿಕೆ ಹಾಕಿದ್ದರು’ ಎಂದು ಆರೋಪಿಸಿದರು.

ಪ್ರತಿಕ್ರಿಯೆಗೆ ಸಿಗದ ಶಾಸಕ: ಆರೋಪಗಳ ಕುರಿತು ಶಾಸಕ ಮುನಿರತ್ನ ಅವರಿಂದ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರಯತ್ನಿಸಿತು. ಆದರೆ, ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ. ಎಸ್‌ಎಂಎಸ್‌ ಮತ್ತು ವಾಟ್ಸ್‌ಆ್ಯಪ್‌ಗಳ ಮೂಲಕ ಕೇಳಿದ ಪ್ರಶ್ನೆಗಳಿಗೂ ಉತ್ತರಿಸಲಿಲ್ಲ.

‘ಆಟೊ ಕೊಡಿಸುವುದಾಗಿ ₹20 ಲಕ್ಷ ವಂಚನೆ’

‘ಶಾಸಕ ಮುನಿರತ್ನ ಅವರು ಘನತ್ಯಾಜ್ಯ ಸಂಗ್ರಹಿಸುವ 10 ಆಟೊ ರಿಕ್ಷಾಗಳನ್ನು ಕೊಡಿಸುವುದಾಗಿ ಭರವಸೆ ನೀಡಿ ₹20 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಚೆಲುವರಾಜು ಆರೋಪಿಸಿದರು.

‘2021ರ ಸೆಪ್ಟೆಂಬರ್‌ನಲ್ಲಿ ಮುನಿರತ್ನ ಅವರ ಅಂಗರಕ್ಷಕ ವಿಜಯ್‌ಕುಮಾರ್‌ ಕರೆ ಮಾಡಿ ಶಾಸಕರನ್ನು ಭೇಟಿಯಾಗುವಂತೆ ಸೂಚಿಸಿದ್ದರು. ಅದರಂತೆ ಭೇಟಿಯಾದಾಗ ಅವರು ₹20 ಲಕ್ಷ ನೀಡುವಂತೆ ತಿಳಿಸಿದ್ದರು. ಸ್ನೇಹಿತರ ಬಳಿ ಸಾಲ ಮಾಡಿ ₹20 ಲಕ್ಷವನ್ನು ಶಾಸಕರಿಗೆ ನೀಡಲು ಹೋಗಿದ್ದೆ. ಅದನ್ನು ಅವರ ಸೂಚನೆ ಮೇರೆಗೆ ವಿಜಯ್‌ಕುಮಾರ್‌ಗೆ ನೀಡಿದ್ದೆ’ ಎಂದು ವಿವರಿಸಿದರು.

‘ಆಟೊಗಳ ಬಗ್ಗೆ ಮುನಿರತ್ನ ಅವರಲ್ಲಿ ವಿಚಾರಿಸಿದಾಗ 10 ಆಟೊಗಳನ್ನು ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿ, ಪತ್ರದ ಒಂದು ಪ್ರತಿಯನ್ನು ನನಗೆ ನೀಡಿದ್ದರು. ಆದರೆ, ನನಗೆ ನೀಡಿದ್ದು ಶಿಫಾರಸ್ಸು ಪತ್ರ ಮಾತ್ರ. ಇದುವರೆಗೂ ಆಟೊಗಳನ್ನು ಕೊಡಿಸಿಲ್ಲ’ ಎಂದು ದೂರಿದರು.

ಮುನಿರತ್ನ ವಿರುದ್ಧ ದೂರು
ಶಾಸಕ ಮುನಿರತ್ನ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊದಲ್ಲಿ ದಲಿತ ಮತ್ತು ಒಕ್ಕಲಿಗ ಸಮುದಾಯಗಳ ಪದಗಳನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಜ್ಞಾನಭಾರತಿ ಪೊಲೀಸ್‌ ಠಾಣೆಗೆ ದೂರು ನೀಡಿದೆ. ‘ಮುನಿರತ್ನ ಅವರು ದಲಿತರಿಗೆ ಅವಮಾನ ಮಾಡುವ ಉದ್ದೇಶದಿಂದ ಹೊಲೆಯ ಎಂಬ ಪದ ಬಳಕೆ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒಕ್ಕೂಟ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.