ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸಿದ್ದ ಆರೋಪದ ಅಡಿ ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಬಿಎಂಪಿ ವಾರ್ಡ್ ಸಂಖ್ಯೆ 35ರ ಕಂದಾಯ ನಿರೀಕ್ಷಕ ಕೆ.ಸಿದ್ಧಗಂಗಯ್ಯ ಅವರು ದೂರು ನೀಡಿದ್ದಾರೆ.
ಕಂಬಳ ಆಯೋಜಕರ ವಿರುದ್ಧ, ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮೇಖ್ರಿ ವೃತ್ತ ಮತ್ತು ಬಳ್ಳಾರಿ ರಸ್ತೆಯಲ್ಲಿ ಕಂಬಳ ಕಾರ್ಯಕ್ರಮಕ್ಕೆ ಶುಭಾಶಯ ಕೋರಿ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಈ ಮೂಲಕ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಯೋಜಕರು ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಿ ಹೈಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.