ADVERTISEMENT

ಆದಾಯಕ್ಕಿಂತ ಹೆಚ್ಚು ಆಸ್ತಿ ಅವ್ಯವಹಾರದ ಆರೋಪ: ಇಬ್ಬರು ಮುಖ್ಯ ಎಂಜಿನಿಯರ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 15:15 IST
Last Updated 13 ಅಕ್ಟೋಬರ್ 2024, 15:15 IST
<div class="paragraphs"><p>ಅಮಾನತು</p></div>

ಅಮಾನತು

   

ಬೆಂಗಳೂರು: ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಕೆ.ಜಿ. ಜಗದೀಶ್ ಮತ್ತು ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಜಲ ಸಂಪನ್ಮೂಲ ಇಲಾಖೆ ಮುಖ್ಯ ಎಂಜಿನಿಯರ್‌ ಮನ್ಮಥಯ್ಯ ಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ.

ಜಗದೀಶ್‌ ಅವರು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಬೆಂಗಳೂರು ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿದ್ದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಅಡಿ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, ಜುಲೈ 11ರಂದು ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿದ್ದರು.

ADVERTISEMENT

ಒಟ್ಟು ₹ 8.30 ಕೋಟಿ ಮೌಲ್ಯದ ಆಸ್ತಿ ಜಗದೀಶ್ ಬಳಿ ಪತ್ತೆಯಾಗಿತ್ತು. ಈ ಪೈಕಿ ₹ 6.85 ಕೋಟಿ ಮೌಲ್ಯದ ಆಸ್ತಿಯು ಅಕ್ರಮ ಸಂಪಾದನೆಯಿಂದ ಬಂದಿದೆ ಎಂದು ಲೋಕಾಯುಕ್ತ ಪೊಲೀಸರು ಪ್ರಾಥಮಿಕ ವರದಿ ಸಲ್ಲಿಸಿದ್ದರು. ಅದೇ ಹುದ್ದೆಯಲ್ಲಿ ಮುಂದುವರಿದರೆ ತನಿಖೆಯ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯನಾಶಕ್ಕೆ ಪ್ರಯತ್ನಿಸುವ ಸಾಧ್ಯತೆ ಇರುವುದರಿಂದ ಅವರನ್ನು ಅಮಾನತು ಮಾಡುವಂತೆ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್‌) ಶಿಫಾರಸು ಮಾಡಿದ್ದರು. ಜಗದೀಶ್ ಅವರನ್ನು ಅಮಾನತುಗೊಳಿಸಿ ಡಿಪಿಎಆರ್‌ ಅಕ್ಟೋಬರ್‌ 10ರಂದು ಆದೇಶ ಹೊರಡಿಸಿದೆ.

ನಿವೇಶನ ಹಂಚಿಕೆಯಲ್ಲಿ ಅಕ್ರಮ: ಮೂಲತಃ ಜಲ ಸಂಪನ್ಮೂಲ ಇಲಾಖೆಯ ವೃಂದಕ್ಕೆ ಸೇರಿರುವ ಮನ್ಮಥಯ್ಯ ಸ್ವಾಮಿ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಹುದ್ದೆಯಲ್ಲಿದ್ದರು. 2021ರ ಮಾರ್ಚ್‌ 9ರಿಂದ 2024ರ ಮಾರ್ಚ್‌ 14ರವರೆಗೆ ಇವರು ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯ ನಿರ್ವಹಿಸಿದ್ದರು.

320 ನಿವೇಶನಗಳ ಒಂದು ಪೂರ್ಣ ಸೆಕ್ಟರ್‌ ಅನ್ನು ಬಿ.ವಿ.ವಿ. ಸಂಘ ಎಂಬ ಸಂಸ್ಥೆಗೆ ಹಂಚಿಕೆ ಮಾಡಿರುವುದೂ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಆರೋಪ ಮನ್ಮಥಯ್ಯ ಸ್ವಾಮಿ ಅವರ ಮೇಲಿದೆ. ಅನರ್ಹರಿಗೆ ನಿವೇಶನ ಹಂಚಿಕೆ, ಅಧಿಕಾರ ವ್ಯಾಪ್ತಿ ಮೀರಿ ತೀರ್ಮಾನ ಕೈಗೊಂಡಿರುವ ಆರೋಪಗಳೂ ಇವೆ.

ಪ್ರಕರಣದ ತನಿಖೆ ನಡೆಸಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತರು, ವರದಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಆರೋಪಿ ಅಧಿಕಾರಿಯನ್ನು ಅಮಾನತು ಮಾಡುವಂತೆ ಜಲ ಸಂಪನ್ಮೂಲ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು. ಅದರ ಆಧಾರದಲ್ಲಿ ಮನ್ಮಥಯ್ಯ ಸ್ವಾಮಿ ಅವರನ್ನು ಅಮಾನತುಗೊಳಿಸಿ ಡಿಪಿಎಆರ್‌ ಅ.9ರಂದು ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.