ADVERTISEMENT

ನೇಮಕಾತಿಯಲ್ಲಿ ಅನ್ಯಾಯ ಆರೋಪ: ಎಚ್‌ಎಎಲ್ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 15:48 IST
Last Updated 7 ಅಕ್ಟೋಬರ್ 2024, 15:48 IST
ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. 
ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.    

ಬೆಂಗಳೂರು: ನಗರದ ಎಚ್‌ಎಎಲ್ ಕಾರ್ಖಾನೆಯಲ್ಲಿನ ಕಾರ್ಮಿಕರ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಎಚ್‌ಎಎಲ್‌ ಕೇಂದ್ರೀಯ ಕನ್ನಡ ಸಂಘದ ವತಿಯಿಂದ ಸೋಮವಾರ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಯಿತು.

ಎಚ್‌ಎಎಲ್‌ನ ಮುಖ್ಯದ್ವಾರದ ಕುವೆಂಪು ವೃತ್ತದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ನೌಕರರ ಸಂಘದ ಸದಸ್ಯರು ಹಾಗೂ ಕಾರ್ಮಿಕರು ಹಣೆ ಮತ್ತು ತೋಳಿಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸಿದರು.

‘ಎಚ್‌ಎಎಲ್ ಸಂಸ್ಥೆಯಲ್ಲಿ ವಿವಿಧ ವಿಭಾಗಗಳಿಗೆ ನಿಶ್ಚಿತ ಅವಧಿಯ ಹುದ್ದೆಗಳ ನೇಮಕಾತಿಯಲ್ಲಿ ಡಿಪ್ಲೊಮಾ, ಐಟಿಐ ತಾಂತ್ರಿಕ ಕ್ಷೇತ್ರದ ಪರಿಣತರ ಆಯ್ಕೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ. ‘ಸಿ’ ಮತ್ತು ‘ಡಿ’ ಗುಂಪಿನ 560 ಹುದ್ದೆಗಳ ಭರ್ತಿಯಲ್ಲಿ 350ಕ್ಕೂ ಹೆಚ್ಚು ಹುದ್ದೆಗಳನ್ನು ಅನ್ಯ ರಾಜ್ಯಗಳವರಿಗೆ ನೀಡಲಾಗಿದೆ. ಕೂಡಲೇ ಆಯ್ಕೆ ಪ್ರಕ್ರಿಯೆ ರದ್ದುಗೊಳಿಸಿ, ಸ್ಥಳೀಯರಿಗೆ ಉದ್ಯೋಗ ನೀಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

‘ಹಿಂದೆ 'ಸಿ' ಮತ್ತು 'ಡಿ' ದರ್ಜೆಯ ಕಾಯಂ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆಯನ್ನು ನೀಡಲಾಗುತಿತ್ತು. ಬದಲಾದ ವ್ಯವಸ್ಥೆಯಲ್ಲಿ ಕಾಯಂ ನೇಮಕಾತಿ ಬದಲು ಸೀಮಿತ ಅವಧಿಗೆ (4 ವರ್ಷ) ನೇಮಕಾತಿ ಮಾಡಲಾಗುತ್ತಿದೆ. ನೇಮಕಾತಿಯ ಕುರಿತು ಅಂಕಿ ಅಂಶಗಳನ್ನು ನೀಡುವಂತೆ ಮಾನವ ಸಂಪನ್ಮೂಲ ಇಲಾಖೆಗೆ ಪತ್ರ ಬರೆದರೂ ಸ್ಪಂದನೆ ನೀಡಿಲ್ಲ’ ಎಂದು ಎಚ್‌ಎಎಲ್‌ನ ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ಡಿ.ರಾಜೇಶ್ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ನೀಡಿ ಪ್ರಾದೇಶಿಕ ಭಾಷೆಯನ್ನು ಕಡೆಗಣಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ನೀಡುವುದರ ಮೂಲಕ ಉತ್ತರ ಭಾರತದವರಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಧೋರಣೆಯಿಂದಾಗಿ ಸ್ಥಳೀಯ ಗ್ರಾಮೀಣ ಅಭ್ಯರ್ಥಿಗಳಿಗೆ ವಂಚನೆ ಆಗುತ್ತಿದೆ’ ಎಂದು ದೂರಿದರು.

ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಡಿ. ದೇವರಾಜ, ನೌಕರರ ಸಂಘದ ಅಧ್ಯಕ್ಷ ಮಹೇಶ್ ಅಂಗಡಿ, ಕಾರ್ಯದರ್ಶಿ ಲಿಂಗರಾಜು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಬಿ.ಎನ್.ಶಿವಲಿಂಗ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.