ADVERTISEMENT

ಪರಿಸರ ನಿಯಮಾವಳಿ ಉಲ್ಲಂಘನೆ ಆರೋಪ; ಯತ್ನಾಳ್ ಮಾಲೀತ್ವದ ಕಾರ್ಖಾನೆ ಮುಚ್ಚಲು ನೋಟಿಸ್

ಚಿರಂಜೀವಿ ಕುಲಕರ್ಣಿ
Published 26 ಜನವರಿ 2024, 19:24 IST
Last Updated 26 ಜನವರಿ 2024, 19:24 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಬೆಂಗಳೂರು: ಬಿಜೆಪಿ ಮುಖಂಡರ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಒಂದು ವರ್ಷದಿಂದಲೂ ಪರಿಸರ ನಿಯಮಾವಳಿ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದ್ದು, ಕಾರ್ಖಾನೆ ಮುಚ್ಚುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೋಟಿಸ್ ಜಾರಿಗೊಳಿಸಿದೆ.

ಅಲ್ಲದೇ ಕಾರ್ಖಾನೆಗಳ ನೋಂದಣಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಕೆಎಸ್‌ಪಿಸಿಬಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕಾರ್ಖಾನೆ ಪರಿಶೀಲನೆ ವೇಳೆ ಅವೈಜ್ಞಾನಿಕ ನಿರ್ವಹಣೆ ಸೇರಿದಂತೆ ಹಲವು ಗಂಭೀರ ಲೋಪಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

2022ರ ನವೆಂಬರ್‌ನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರ ಮಾಲೀಕತ್ವದಲ್ಲಿ ಕಲಬುರಗಿಯ ಚಿಂಚೋಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ, ಸಿದ್ದಶ್ರೀ ಸೌಹಾರ್ದ ಸಹಕಾರ ಸಕ್ಕರೆ ಕಾರ್ಖಾನೆಗೆ ಮಂಡಳಿ ಅನುಮತಿ ನೀಡಿತ್ತು. ಈ ಕಾರ್ಖಾನೆಗೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಳ್ಳಾರಿಯ ಬಿ.ಶ್ರೀರಾಮುಲು ನಿರ್ದೇಶಕ.

ADVERTISEMENT

ಕೆಎಸ್‌ಪಿಸಿಬಿಯು ಸಕ್ಕರೆ ಕಾರ್ಖಾನೆಗೆ ಕೆಲವು ಷರತ್ತು ವಿಧಿಸಿ ಅನುಮತಿ ನೀಡಿತ್ತು. ಆದರೆ, ಕಳೆದ ವರ್ಷ ಮಂಡಳಿ ಪ್ರಾದೇಶಿಕ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಅನುಮತಿ ಪಡೆಯದೇ ಬಾಯ್ಲರ್ ಆರಂಭ, ಕಬ್ಬು ಅರೆಯುವಿಕೆ, ತ್ಯಾಜ್ಯ ಸಂಸ್ಕರಣಾ ಘಟಕವು ನಿರ್ಮಾಣ ಹಂತದಲ್ಲಿದ್ದರೂ ಅನುಮತಿ ಪಡೆಯದೇ ಡಿಸ್ಟಿಲರಿ ಘಟಕವನ್ನು ಸ್ಥಾಪಿಸಿದ್ದು ಕಂಡುಬಂದಿತ್ತು.

ನಿಯಮ ಉಲ್ಲಂಘನೆ ಸಂಬಂಧ ವಿವರ ಪಡೆಯಲು ಮಂಡಳಿ, ಕಳೆದ ಮಾರ್ಚ್‌ನಲ್ಲಿ ಕಾರ್ಖಾನೆಗೆ ನೋಟಿಸ್ ಜಾರಿಗೊಳಿಸಿತ್ತು. ನಿಯಮ ಉಲ್ಲಂಘಿಸಿದ್ದರೂ ಒಂದು ವರ್ಷದಿಂದ ಕಾರ್ಖಾನೆ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪವಿದೆ.

ಪರಿಸರ ಮಾಲಿನ್ಯ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ  ಸಕ್ಕರೆ ಕಾರ್ಖಾನೆಗೆ ಕೇಂದ್ರ ಪರಿಸರ ಸಚಿವಾಲಯ‌ವು ಕಳೆದ ವರ್ಷ ₹1.58 ಕೋಟಿ ದಂಡ ಸಹ ವಿಧಿಸಿತ್ತು.

ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಕೆಎಸ್‌ಪಿಸಿಬಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕಾರ್ಖಾನೆಯನ್ನು ಮುಚ್ಚುವಂತೆ ನೋಟಿಸ್ ಕಳುಹಿಸಲಾಗಿದೆ. ರಾಜ್ಯದಲ್ಲಿ ನಿಯಮ ಉಲ್ಲಂಘಿಸುತ್ತಿರುವ ಕಾರ್ಖಾನೆಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಕೆಎಸ್‌ಪಿಸಿಬಿ ಅಧ್ಯಕ್ಷ ಶಾಂತ ತಮ್ಮಯ್ಯ ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.