ಬೆಂಗಳೂರು: ‘ಏಳು ಕೋಟಿ ಜನರ ಭಾಷೆಯಾಗಿರುವ ಕನ್ನಡಕ್ಕೆ ಅನುದಾನ ಹಂಚಿಕೆಯಲ್ಲಿಕೇಂದ್ರ ಸರ್ಕಾರ ತಾರತಮ್ಯ ಮಾಡಿರುವುದು ಖಂಡನೀಯ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕೇಂದ್ರ ಸರ್ಕಾರ 7 ವರ್ಷಗಳಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ನೀಡಿದ ಅನುದಾನ ಕೇವಲ ₹ 8.39 ಕೋಟಿ. ಸಂಸ್ಕೃತ ಭಾಷೆಗೆ ₹ 1,200 ಕೋಟಿ ಹಾಗೂ ತಮಿಳಿಗೆ ₹ 50 ಕೋಟಿ ಅನುದಾನ ನೀಡಲಾಗಿದೆ. ಕನ್ನಡ ಕಡೆಗಣನೆಯನ್ನು ಯಾವ ಕನ್ನಡ ಪ್ರೇಮಿಯೂ ಸಹಿಸಿಕೊಳ್ಳಲಾರ. ಕೇಂದ್ರ ಸರ್ಕಾರವು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಇತಿಹಾಸ ಇರುವ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿ, ಕೈತೊಳೆದುಕೊಂಡಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ನಮ್ಮ ಭಾಷೆಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಒಬ್ಬಿಬ್ಬರು ಸಂಸದರು ಮಾತ್ರ ಧ್ವನಿ ಎತ್ತುತ್ತಿದ್ದಾರೆ. ಉಳಿದವರು ಬಾಯಿ ಮುಚ್ಚಿಕೊಂಡಿರುವುದು ಅವಮಾನಕರ ಸಂಗತಿ. ಅವರೆಲ್ಲರೂ ನೆರೆಯ ರಾಜ್ಯಗಳನ್ನು ನೋಡಿಯಾದರೂ ಎಚ್ಚೆತ್ತುಕೊಳ್ಳಬೇಕು. ತಕ್ಷಣ ಕೇಂದ್ರ ಸರ್ಕಾರ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನಕ್ಕೆ (ಸಿಐಐಎಲ್) ಹೆಚ್ಚು ಹಣ ಬಿಡುಗಡೆ ಮಾಡಬೇಕು. ಅದಕ್ಕೆ ಸ್ವಾಯತ್ತತೆ ಒದಗಿಸುವ ಬಗ್ಗೆ ಆದೇಶ ಹೊರಡಿಸಿ, ಬಹುದಿನಗಳ ಬೇಡಿಕೆ ಈಡೇರಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.