ಬೆಂಗಳೂರು: ‘ರಕ್ಷಣಾ ಉತ್ಕೃಷ್ಟ ತೆಗಾಗಿ ಆವಿಷ್ಕಾರ (ಐಡೆಕ್ಸ್) ಯೋಜನೆಯಡಿ ಕಾರ್ಯನಿರ್ವಹಿಸುವ ನವೋದ್ಯಮಗಳಿಗೆ ನೀಡುವ ಅನುದಾನ ಹೆಚ್ಚಳಕ್ಕೂ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ’ ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದರು.
ಏರೊ ಇಂಡಿಯಾ 2021 ವೈಮಾನಿಕ ಪ್ರದರ್ಶನದಲ್ಲಿ 'ನವೋದ್ಯಮ ಮಂಥನ' ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮಾತನಾಡಿದರು.
'ಐಡೆಕ್ಸ್ ಕಾರ್ಯಕ್ರಮಕ್ಕೆ ನಿಗದಿಪಡಿಸಿರುವ ಅನುದಾನ ಏನೂ ಸಾಲದು ಎಂದು ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೊತ್ತ ತೀರಾ ಕಡಿಮೆಯಾಯಿತು ಎಂದು ನನಗೂ ಅನಿಸಿದೆ. ಅನುದಾನದ ಮೊತ್ತವನ್ನು ಹೆಚ್ಚಿಸಲು ಏನಾದರೂ ಕ್ರಮ ಕೈಗೊಳ್ಳುವಂತೆ ರಕ್ಷಣಾ ಉತ್ಪಾದನಾ ಇಲಾಖೆ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ' ಎಂದರು.
'ರಕ್ಷಣಾ ಸಾಧನಗಳ ಉತ್ಪಾದನೆಯಲ್ಲಿ ಭಾರತದ ಸ್ವಾಯತ್ತತೆ ಉಳಿಸಿಕೊಳ್ಳಬಕಾದರೆ ಸ್ವಾವಲಂಬನೆ ಸಾಧಿಸುವುದು ಅಗತ್ಯ. ರಕ್ಷಣಾ ಉತ್ಪಾದನೆಯ ನವೋದ್ಯಮಗಳಿಗೆ ಉತ್ತೇಜನಕಾರಿ ವಾತಾವರಣವನ್ನು‘ಐಡೆಕ್ಸ್’ ರೂಪಿಸಿದೆ. ದೇಶದಲ್ಲೇ ಅತ್ಯಂತ ಪರಿಣಾಮಕಾರಿಯಾದ ಹಾಗೂ ಅತ್ಯುತ್ತಮವಾಗಿ ಅನುಷ್ಠಾನಕ್ಕೆ ತಂದ ಕಾರ್ಯಕ್ರಮಗಳಲ್ಲಿ ಇದೂ ಒಂದು. ಆತ್ಮನಿರ್ಭರ ಭಾರತ ಅಭಿಯಾನದ ಆಶಯಕ್ಕೆ ಅನುಗುಣವಾಗಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಇಟ್ಟಿರುವ ದಿಟ್ಟ ಹೆಜ್ಜೆ ಇದು ಎಂಬುದು ನನ್ನ ನಂಬಿಕೆ' ಎಂದು ಸಿಂಗ್ ಬಣ್ಣಿಸಿದರು.
ರಕ್ಷಣಾ ವಲಯ ಮತ್ತು ವೈಮಾಂತರಿಕ್ಷ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ), ನವೋದ್ಯಮಿಗಳು ಹಾಗೂ ವೈಯಕ್ತಿಕ ನೆಲೆಯಲ್ಲಿ ಆವಿಷ್ಕಾರ ಮಾಡುವವರು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ (ಆರ್ ಆ್ಯಂಡ್ ಡಿ) ತೊಡಗಿರುವವರು ಹಾಗೂ ಶಿಕ್ಷಣ ಸಂಸ್ಥೆಗಳ ನೆರವು ಪಡೆಯುವ ಮಹತ್ವದ ತೀರ್ಮಾನವನ್ನು ಕೇಂದ್ರ ಸರ್ಕಾರ ಮೂರು ವರ್ಷಗಳ ಹಿಂದೆ ಕೈಗೊಂಡಿತ್ತು. ರಕ್ಷಣಾ ತಂತ್ರಗಳ ಸುಧಾರಣೆಗೆ ಉತ್ತೇಜನ ನೀಡಲು 2018ರಲ್ಲಿ ಐಡೆಕ್ಸ್ ಕಾರ್ಯಕ್ರಮವನ್ನು ಆರಂಭಿಸಿತ್ತು. ‘ಐಡೆಕ್ಸ್ ಸವಾಲು’ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ, ನವೋದ್ಯಮಗಳನ್ನು ಪೋಷಿಸುವ ಪ್ರಮುಖ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಾಂತ್ರಿಕ ನೆರವು ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ.
‘ಆರಂಭವಾದಂದಿನಿಂದಲೂ ಭಾರಿ ಯಶಸ್ಸು ಸಾಧಿಸಿರುವ ಈ ಕಾರ್ಯಕ್ರಮ 41ಸಾವಿರಕ್ಕೂ ಅಧಿಕ ನವೋದ್ಯಮಗಳಿಗೆ ಬೆಂಬಲವಾಗಿ ನಿಂತಿದೆ. 4.7 ಲಕ್ಣ ಉದ್ಯೋಗ ಸೃಷ್ಟಿಸಿದೆ’ ಎಂದು ಸಿಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.