ADVERTISEMENT

ಮರೆವು ಕಾಯಿಲೆಗೆ ‘ಟೆಲಿ ಮನಸ್’ ನೆರವು: ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 16:18 IST
Last Updated 21 ಸೆಪ್ಟೆಂಬರ್ 2023, 16:18 IST
Venugopala K.
   Venugopala K.

ಬೆಂಗಳೂರು: ‘ಅಲ್ಝೈಮರ್‌’ (ಬುದ್ಧಿಮಾಂದ್ಯತೆ) ಹಾಗೂ ‘ಡಿಮೆನ್ಶಿಯಾ’ (ಮರೆವು) ಕಾಯಿಲೆಗೆ ಒಳಗಾದವರಿಗೆ ‘ಟೆಲಿ ಮನಸ್’ ಸಹಾಯವಾಣಿ ಅಡಿ ನೆರವು ನೀಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ವಿಶ್ವ ಅಲ್ಝೈಮರ್‌ ದಿನದ ಪ‍್ರಯುಕ್ತ ಪ್ರಕಟಣೆ ಹೊರಡಿಸಿರುವ ಇಲಾಖೆ, ‘ಈ ರೋಗದ ಬಗ್ಗೆ ಜಾಗೃತಿ ಮೂಡಿಸಿ, ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು. ಈ ಕಾಯಿಲೆ ಎದುರಿಸುತ್ತಿರುವವರಿಗೆ ಸಹಾನುಭೂತಿಯ ಆರೈಕೆ ಅಗತ್ಯ. ದಿನನಿತ್ಯದ ಜೀವನದಲ್ಲಿ ನೆನಪಿನ ಶಕ್ತಿ ಕಡಿಮೆಯಾಗುವುದು, ಸ್ಥಳ ಮತ್ತು ಸಮಯದ ಬಗ್ಗೆ ಗೊಂದಲ, ವಸ್ತುಗಳನ್ನು ಎಲ್ಲೆಂದರೆಲ್ಲಿ ಇಡುವುದು, ದೃಶ್ಯಗಳು ಹಾಗೂ ಚಿತ್ರಗಳನ್ನು ಗುರುತಿಸುವಲ್ಲಿ ವಿಫಲರಾಗುವುದು ಸೇರಿ ವಿವಿಧ ಲಕ್ಷಣಗಳನ್ನು ಈ ಕಾಯಿಲೆಗೆ ಒಳಗಾದವರು ಎದುರಿಸುತ್ತಾರೆ’ ಎಂದು ತಿಳಿಸಿದೆ. 

‘ಸಕ್ರಿಯವಾಗಿದ್ದಲ್ಲಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. ಸಮುದಾಯದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದು, ನಿಯಮಿತ ವ್ಯಾಯಾಮ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು, ಆರೋಗ್ಯಕರ ಆಹಾರ ಪದ್ಧತಿ ಸೇರಿ ವಿವಿಧ ಕ್ರಮಗಳಿಂದ ರೋಗದ ಅಪಾಯ ಕಡಿಮೆ ಮಾಡಬಹುದು’ ಎಂದು ಇಲಾಖೆ ಹೇಳಿದೆ.

ADVERTISEMENT

‘ಎಲ್ಲಾ ರೀತಿಯ ಮಾನಸಿಕ ಸಮಸ್ಯೆಗಳಿಗೆ ‘ಟೆಲಿ ಮನಸ್’ ಸಹಾಯವಾಣಿ ಮೂಲಕ 20 ಭಾಷೆಗಳಲ್ಲಿ ಸೇವೆ ಒದಗಿಸಲಾಗುತ್ತಿದೆ. ಮಾನಸಿಕ ಸಮಸ್ಯೆ ಎದುರಿಸುತ್ತಿರುವವರು ಇದರ ಪ್ರಯೋಜನ ಪಡೆದುಕೊಳ್ಳಬಹದು. ಮಾರ್ಗದರ್ಶನ ಅಗತ್ಯ ಇರುವವರು ಟೆಲಿ ಮನಸ್ ಸಹಾಯವಾಣಿ 14416ಕ್ಕೆ ಸಂಪರ್ಕಿಸಬಹುದು’ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.