ADVERTISEMENT

ಕಟ್ಟಡ ಕಾರ್ಮಿಕರಿಗಾಗಿ ‘ಅಂಬೇಡ್ಕರ್‌ ಸೇವಾ ಕೇಂದ್ರ’: ಸಂತೋಷ್ ಲಾಡ್

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 15:48 IST
Last Updated 7 ಆಗಸ್ಟ್ 2024, 15:48 IST
<div class="paragraphs"><p>ಸಂತೋಷ್ ಲಾಡ್</p></div>

ಸಂತೋಷ್ ಲಾಡ್

   

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ನೋಂದಣಿ, ಫಲಾನುಭವಿಗಳ ಆಯ್ಕೆ, ನೈಜತೆ ಪರಿಶೀಲನೆ ಮತ್ತಿತರ ಕೆಲಸಗಳನ್ನು ನಿರ್ವಹಿಸಲು ಪ್ರತ್ಯೇಕವಾಗಿ ‘ಅಂಬೇಡ್ಕರ್‌ ಸೇವಾ ಕೇಂದ್ರ’ವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಗಿದೆ.

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಂಡಳಿಯ ಸಭೆಯಲ್ಲಿ ಅಂಬೇಡ್ಕರ್‌ ಸೇವಾ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ. ಅನರ್ಹ ಫಲಾನುಭವಿಗಳನ್ನು ಪತ್ತೆಮಾಡುವ ಜವಾಬ್ದಾರಿಯನ್ನೂ ಸೇವಾ ಕೇಂದ್ರಗಳಿಗೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಂತೋಷ್ ಲಾಡ್, ‘ರಾಜ್ಯದಲ್ಲಿ 58 ಲಕ್ಷ ಮಂದಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರು ಎಂಬುದಾಗಿ ನೋಂದಣಿ ಮಾಡಿಕೊಂಡಿದ್ದರು. ನೈಜತೆ ಪರಿಶೀಲನೆ ಬಳಿಕ 20 ಲಕ್ಷ ಮಂದಿಯ ನೋಂದಣಿ ರದ್ದುಗೊಳಿಸಲಾಗಿದೆ. ಉಳಿದಿರುವ 38 ಲಕ್ಷ ಮಂದಿಯ ನೈಜತೆ ಪರಿಶೀಲನೆಯನ್ನೂ ಅಂಬೇಡ್ಕರ್‌ ಸೇವಾ ಕೇಂದ್ರಗಳಿಗೆ ವಹಿಸಲು ತೀರ್ಮಾನಿಸಲಾಗಿದೆ’ ಎಂದರು.

ಜಿಐಎಸ್‌ ಮ್ಯಾಪಿಂಗ್‌ಗೆ ನಿರ್ಧಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾಮಗಾರಿಗಳು ಮತ್ತು ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಡೆಸುವವರು ಕಾರ್ಮಿಕ ಕಲ್ಯಾಣ ಸೆಸ್‌ ಪಾವತಿಸದೇ ವಂಚಿಸುವುದನ್ನು ತಡೆಯಲು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಮೂಲಕ ಆಸ್ತಿಗಳ ಪಟ್ಟಿ ಮಾಡುವ (ಮ್ಯಾಪಿಂಗ್‌) ನಿರ್ಧಾರವನ್ನೂ ಮಂಡಳಿಯ ಸಭೆ ಕೈಗೊಂಡಿದೆ.

‘ಈಗ ವಾರ್ಷಿಕ ₹ 800 ಕೋಟಿ ಸೆಸ್‌ ಸಂಗ್ರಹವಾಗುತ್ತಿದೆ. ಜಿಐಎಸ್‌ ಮ್ಯಾಪಿಂಗ್‌ ಮಾಡಿದರೆ ಸಂಗ್ರಹ ದುಪ್ಪಟ್ಟಾಗಲಿದೆ. ಮಂಡಳಿ ಆರಂಭವಾದ ದಿನದಿಂದ ಈವರೆಗೆ ಸೆಸ್ ಪಾವತಿಸದೆ ವಂಚಿಸಿರುವವರನ್ನು ಪತ್ತೆಹಚ್ಚಿ, ಬಾಕಿ ವಸೂಲಿ ಮಾಡುವುದೂ ಸಾಧ್ಯವಾಗಲಿದೆ’ ಎಂದು ಸಚಿವರು ಹೇಳಿದರು.

ವಸತಿ ಯೋಜನೆ: ಕಟ್ಟಡ ಕಾರ್ಮಿಕರ ವಸತಿ ಯೋಜನೆಯನ್ನು ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಆರಂಭಿಸುವ ಕುರಿತು ಚರ್ಚಿಸಲಾಗಿದೆ. ಫಲಾನುಭವಿಗಳ ವಂತಿಕೆ, ಮಂಡಳಿಯಿಂದ ₹ 2 ಲಕ್ಷ ಬಡ್ಡಿರಹಿತ ಸಾಲ ಹಾಗೂ ಬ್ಯಾಂಕ್‌ ಸಾಲದಿಂದ ಮನೆ ನಿರ್ಮಿಸುವ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲಿ ಯೋಜನೆಯ ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದರು.

ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ, ಕಾರ್ಮಿಕ ಇಲಾಖೆಯ ಆಯುಕ್ತ ಗೋಪಾಲಕೃಷ್ಣ, ಮಂಡಳಿಯ ಸದಸ್ಯರಾದ ಎಚ್.ಜೆ.ರಮೇಶ್, ವಿಜಯಕುಮಾರ್ ಪಾಟೀಲ್, ಜಾನಿ, ಶ್ರೇಯಾನ್ಸ್, ಕವಿತಾ ರೆಡ್ಡಿ ಸಭೆಯಲ್ಲಿದ್ದರು.

ಕಾರ್ಮಿಕ ಸಂಘಟನೆ ಮುಖಂಡರೊಂದಿಗೆ ಚರ್ಚೆ

ವಿದ್ಯಾರ್ಥಿ ವೇತನ ವಿತರಣೆ ಸೇರಿದಂತೆ ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳ ಕುರಿತು ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಬುಧವಾರ ಚರ್ಚೆ ನಡೆಸಿದರು.

‘ವಿದ್ಯಾರ್ಥಿ ವೇತನಕ್ಕಾಗಿ 13 ಲಕ್ಷ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಅರ್ಜಿದಾರರಿಗೂ ವಿದ್ಯಾರ್ಥಿ ವೇತನ ನೀಡಲು ₹ 2500 ಕೋಟಿ ಅಗತ್ಯ. ಸ್ಪಷ್ಟ ಮಾರ್ಗಸೂಚಿ ರೂಪಿಸಿದ ಬಳಿಕ ವಿದ್ಯಾರ್ಥಿ ವೇತನ ವಿತರಿಸಲಾಗುವುದು’ ಎಂಬುದಾಗಿ ಸಚಿವರು ಕಾರ್ಮಿಕ ಮುಖಂಡರಿಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.