ಬೆಂಗಳೂರು: ‘ಅಂಬಿಗ ನಾ ನಿನ್ನ ನಂಬಿದೆ’ ವಚನಕ್ಕೆ ಪುರಂದರ ವಿಠ್ಠಲ ಎಂಬುದನ್ನು ಸೇರಿಸಿ ಕೃತಿಚೌರ್ಯ ಮಾಡಲಾಗಿದೆ. ಅದು ಪುರಂದರದಾಸರ ಕೀರ್ತನೆಯಲ್ಲ ಎಂದು ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಪ್ರತಿಪಾದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವ ಕಲ್ಯಾಣದಲ್ಲಿ ತ್ರಿಪುರಾಂತಕ ಕೆರೆಯನ್ನು ದಾಟಿ ಶರಣರು ಅನುಭವ ಮಂಟಪಕ್ಕೆ ಬರಬೇಕಿತ್ತು. ಅಂಬಿಗರ ಚೌಡಯ್ಯ ಎಲ್ಲರನ್ನೂ ದೋಣಿಯಲ್ಲಿ ದಾಟಿಸುತ್ತಿದ್ದರು. ಅವರ ದೋಣಿಯಲ್ಲಿ ಶರಣೆ ಅಕ್ಕಮಹಾದೇವಿ ದಾಟುತ್ತಿರುವಾಗ ರಚಿಸಿದ ವಚನ ಅದು ಎಂದು ಹೇಳಿದರು.
‘ಹಲವು ವಚನಗಳನ್ನು ಬದಲಾಯಿಸಲಾಗಿದೆ. ಕೃತಿ ಚೌರ್ಯ ಮಾಡಲಾಗಿದೆ. ಬದಲಾಯಿಸಲಾಗಿದೆ’ ಎಂದು ತಿಳಿಸಿದರು.
ವಾಲ್ಮೀಕಿ, ಬಸವಣ್ಣ, ಕನಕದಾಸ ಮುಂತಾದ ಮಹನೀಯರ ಪುತ್ಥಳಿಗಳು ವಿಧಾನಸೌಧದ ಆವರಣದಲ್ಲಿದೆ. ಅಂಬಿಗರ ಚೌಡಯ್ಯ ಪುತ್ಥಳಿ ಕೂಡ ಅಲ್ಲೇ ಮಾಡಬೇಕು. ಅಂಬಿಗರ ಎಲ್ಲ ಪಂಗಡಗಳನ್ನು ಎಸ್‌ಟಿಗೆ ಸೇರಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ‘ವಿಧಾನಸೌಧದ ಆವರಣದಲ್ಲಿ ಕಷ್ಟವಾದರೂ ನಗರದ ಎಲ್ಲಾದರೂ ಒಂದು ಕಡೆ ಅಂಬಿಗರ ಚೌಡಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.
ಗಂಗಾಮತಸ್ಥ ಸಮಾಜಕ್ಕೆ ಒಂದು ಎಕರೆ ಜಮೀನು ನೀಡಲಾಗಿದೆ. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಜಮೀನು ಹಸ್ತಾಂತರ ತಡವಾಗಿದೆ. ವಿವಾದ ಬಗೆಹರಿದರೆ ಇಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲು ₹ 5 ಕೋಟಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಅಂಬಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಡತ ಕೇಂದ್ರ ಸರ್ಕಾರದಿಂದ ವಾಪಸ್ಸಾಗಿದೆ. ಅದರಲ್ಲಿ ಇರುವ ನ್ಯೂನತೆ ಸರಿಪಡಿಸಿ ಮತ್ತೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆಯಾಗಲಿ ಎಂದು ನಗರದಲ್ಲಿ ವಿದ್ಯಾರ್ಥಿನಿಲಯ ನಿರ್ಮಿಸಲಾಗಿದೆ. 120 ವಿದ್ಯಾರ್ಥಿಗಳಿಗೆ ಇರಲು ಅವಕಾಶ ಇದೆ. ಸಮುದಾಯದವರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ರಾಜ್ಯ ಗಂಗಾಮತಸ್ಥರ ಸಂಘದ ಅಧ್ಯಕ್ಷ ಬಿ. ಮೌಲಾಲಿ ಮನವಿ ಮಾಡಿದರು.
ಕೆರೆಗಳಲ್ಲಿ ಮೀನು ಹಿಡಿಯುವ ಗುತ್ತಿಗೆಯನ್ನು ಬೇರೆ ಸಮುದಾಯಗಳಿಗೆ ನೀಡಲಾಗುತ್ತಿದೆ. ಮೀನುಗಾರಿಕೆಯೇ ಕಸುಬಾಗಿಸಿಕೊಂಡ ಸಮುದಾಯಗಳಿಗೆ ನೀಡಬೇಕು ಎಂದು ರಾಜ್ಯ ಗಂಗಾಮತಸ್ಥರ ನೌಕರರ ಸಂಘದ ಅಧ್ಯಕ್ಷ ಎಂ. ಶ್ರೀನಿವಾಸ ಒತ್ತಾಯಿಸಿದರು.
ಶಾಸನ ಸಂಶೋಧಕ ಎಂ.ಎಸ್. ಶಿರವಾಳ ಅವರು ಅಂಬಿಗರ ಚೌಡಯ್ಯರ ಬಗ್ಗೆ ಉಪನ್ಯಾಸ ನೀಡಿದರು. ರಾಜ್ಯ ಗಂಗಾಮತಸ್ಥರ ಸಂಘದ ಉಪಾಧ್ಯಕ್ಷ ಮಣ್ಣೂರು ನಾಗರಾಜ, ಕೆಪಿಸಿಸಿ ಹಿಂದುಳಿದ ವರ್ಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಬಿ. ಸೀತಾರಾಂ, ರಾಜ್ಯ ಮೀನುಗಾರರ ನಿಗಮದ ಅಧ್ಯಕ್ಷ ಮಂಜುನಾಥ್ ಸುಣಗಾರ, ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಜಯರಾಮ್, ಬೆಂಗಳೂರು ನಗರ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಜೆ.ಟಿ. ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ, ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.