ADVERTISEMENT

ಅಗತ್ಯಬಿದ್ದರೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜಗಜೀವನ್‌ ರಾಂ ಭವನ, ಸಂಶೋಧನಾ ಸಂಸ್ಥೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 19:47 IST
Last Updated 13 ಜುಲೈ 2024, 19:47 IST
ಬೆಂಗಳೂರಿನಲ್ಲಿ ಶನಿವಾರ ಬಾಬು ಜಗಜೀವನ ರಾಂ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ, ಮೀರಾ ಕುಮಾರ್‌, ಸಚಿವ ಎಚ್‌.ಸಿ. ಮಹದೇವಪ್ಪ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಶನಿವಾರ ಬಾಬು ಜಗಜೀವನ ರಾಂ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ, ಮೀರಾ ಕುಮಾರ್‌, ಸಚಿವ ಎಚ್‌.ಸಿ. ಮಹದೇವಪ್ಪ ಭಾಗವಹಿಸಿದ್ದರು.   

ಬೆಂಗಳೂರು: ‘ಪಿಟಿಸಿಎಲ್ ಕಾಯ್ದೆಗೆ ಅಗತ್ಯ ಬಿದ್ದರೆ ತಿದ್ದುಪಡಿ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ಬಾಬು ಜಗಜೀವನ ರಾಂ ಭವನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  

‘ಬ್ಯಾಂಕ್‌, ಕೆಎಸ್‌ಎಫ್‌ಸಿಯಲ್ಲಿ ಎಸ್‌ಸಿ–ಎಸ್‌ಟಿ ಉದ್ಯಮಿಗಳಿಗೆ ಶೇ 4 ಬಡ್ಡಿಯಲ್ಲಿ ₹10 ಕೋಟಿವರೆಗೆ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿತ್ತು. ಎಸ್‌ಸಿಎಸ್‌ಪಿ /ಟಿಎಸ್‌ಪಿ ಕಾಯ್ದೆಯ ಸೆಕ್ಷನ್‌ 7(ಡಿ) ಕೈಬಿಡಲು ಬಂದ ಒತ್ತಾಯದಂತೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇನ್ನೂ ಬದಲಾವಣೆಗಳು ಅಗತ್ಯವಿದ್ದರೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ದಲಿತ ಸಂಘಟನೆಗಳು 70ರ ದಶಕದಲ್ಲಿ ಸಾರಾಯಿ ಅಂಗಡಿಗಳು ಬೇಡ, ವಸತಿ ಶಾಲೆಗಳು ಬೇಕು ಎಂದು ಬೇಡಿಕೆ ಸಲ್ಲಿಸಿದ್ದರಿಂದ ವಸತಿ ಶಾಲೆಗಳನ್ನು ಪ್ರಾರಂಭ ಮಾಡಲಾಗಿತ್ತು. 94-95 ರಲ್ಲಿ ಹಣಕಾಸು ಸಚಿವರಾಗಿದ್ದಾಗ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದ್ದೆ’ ಎಂದು ಸ್ಮರಿಸಿದರು.

‘ದಲಿತರಿಗೆ ಸಾಮಾಜಿಕ ಆರ್ಥಿಕ ಶಕ್ತಿ ಬರಬೇಕು. ಆಗ ಮಾತ್ರ ಅವರು ಮುಂಚೂಣಿಗೆ ಬರಲು ಸಾಧ್ಯವಾಗುತ್ತದೆ. ಬಸವಣ್ಣ, ಬಾಬು ಜಗಜೀವನ್ ರಾಂ ಅವರು ಕಂಡಿದ್ದ ಕನಸು ನನಸಾಗಲು ಆರ್ಥಿಕ ಸಾಮಾಜಿಕ ಶಕ್ತಿ ಬರಬೇಕು. ಸಾಮಾಜಿಕ ನ್ಯಾಯದ  ವಿರುದ್ಧವಾದ ನಿಲುವನ್ನು ನಮ್ಮ ಸರ್ಕಾರ ಎಂದಿಗೂ ಕೈಗೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎಲ್ಲರೂ ವಿದ್ಯಾವಂತರಾಗಬೇಕು. ಶಿಕ್ಷಣ, ಸಂಘಟನೆ, ಹೋರಾಟ ಮಾಡಬೇಕು ಎಂಬುದು ಅಂಬೇಡ್ಕರ್‌ ಕನಸಾಗಿತ್ತು. ಜಾತಿವಿನಾಶವಾಗದೇ ಸಮಾನತೆ ಬರುವುದಿಲ್ಲ ಎಂಬುದು ಅಂಬೇಡ್ಕರ್‌, ಜಗಜೀವನ್ ರಾಂ ಚಿಂತನೆಯಾಗಿತ್ತು. ಹಂತಹಂತವಾಗಿ ಜಾತಿ ವಿನಾಶ ಮಾಡಬೇಕು’ ಎಂದರು.

ಎಚ್‌. ಆಂಜನೇಯ ಸಮಾಜಕಲ್ಯಾಣ ಸಚಿವರಾಗಿದ್ದಾಗ ಬಾಬು ಜಗಜೀವನರಾಂ ಭವನ ಮತ್ತು ಸಂಶೋಧನಾ ಸಂಸ್ಥೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ₹ 106 ಕೋಟಿ ವೆಚ್ಚದಲ್ಲಿ ದೇಶಕ್ಕೇ ಮಾದರಿಯಾದ ಸಂಸ್ಥೆ ನಿರ್ಮಾಣಗೊಂಡಿದೆ ಎಂದು ಶ್ಲಾಘಿಸಿದರು.

ಲೋಕಸಭೆಯ ಮಾಜಿ ಸ್ಪೀಕರ್ ಮೀರಾಕುಮಾರ್ ಅವರು ಬಾಬು ಜಗಜೀವನ ರಾಂ ಪುತ್ಥಳಿಯ ಶಂಕುಸ್ಥಾಪನೆ ನೆರವೇರಿಸಿದರು. ಶಾಸಕ ಮುನಿರತ್ನ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಡಾ.ಎಚ್.ಸಿ ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.