ಬೆಂಗಳೂರು: ಅಮೆರಿಕದ ‘ಸರ್ಜನ್ ಜನರಲ್’ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ವಿವೇಕ್ ಮೂರ್ತಿ ಅವರು ಇಲ್ಲಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ಜಯದೇವ ಹೃದ್ರೋಗ ಸಂಸ್ಥೆಗೆ ಭೇಟಿ ನೀಡಿ, ಮಾನಸಿಕ ಆರೋಗ್ಯದ ಬಗ್ಗೆ ಚರ್ಚಿಸಿದರು.
ಮೂರ್ತಿ ಅವರು ಕರ್ನಾಟಕ ಮೂಲದವರಾಗಿದ್ದು, ಅವರ ಪಾಲಕರು ಮಂಡ್ಯ ಜಿಲ್ಲೆಯವರಾಗಿದ್ದಾರೆ. ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಅವರು ಜಾಗತಿಕ ಪ್ರವಾಸ ಕೈಗೊಂಡಿದ್ದಾರೆ. ನಿಮ್ಹಾನ್ಸ್‌ಗೆ ಭೇಟಿ ನೀಡಿದ ಅವರಿಗೆ ಸಂಸ್ಥೆಯ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರು ಟೆಲಿ ಮನಸ್ ಕೇಂದ್ರ, ನಿಮ್ಹಾನ್ಸ್ ಡಿಜಿಟಲ್ ಅಕಾಡೆಮಿ ಸೇರಿ ವಿವಿಧ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನದ ಬಗ್ಗೆ ಭಾರತ–ಅಮೆರಿಕ ನಡುವಿನ ಸಹಭಾಗಿತ್ವದ ಬಗ್ಗೆಯೂ ಅವರು ಚರ್ಚಿಸಿದರು.
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಟೆಲಿ ಮನಸ್ ಬಗ್ಗೆ ಮಾಹಿತಿ ನೀಡಿದ ಡಾ. ಪ್ರತಿಮಾ ಮೂರ್ತಿ, ‘ಆರೋಗ್ಯ ಕ್ಷೇತ್ರದ ಗಮನಾರ್ಹ ಸಾಧನೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರತಿಷ್ಠಿತ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ಸಂಸ್ಥೆ ಈ ವರ್ಷ ಪಡೆದಿದೆ. ಟೆಲಿ ಮನಸ್ ಸಹಾಯವಾಣಿಯ ಮೂಲಕ ಮಾನಸಿಕ ಸಮಸ್ಯೆಗಳಿಗೆ ಪರಿಹಾರೋಪಾಯ ಒದಗಿಸಲಾಗುತ್ತಿದೆ. ಈಗಾಗಲೇ ದೇಶದ ವಿವಿಧೆಡೆಯಿಂದ 14 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಲಾಗಿದೆ. ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ವಿವರಿಸಿದರು.
ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಮಾತನಾಡಿದ ಡಾ. ವಿವೇಕ್ ಮೂರ್ತಿ, ‘ಮಾನಸಿಕ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ. ಆಗ ಮಾನಸಿಕ ಆರೋಗ್ಯದ ಬಿಕ್ಕಟ್ಟನ್ನು ಎದುರಿಸಬಹುದು’ ಎಂದ ಅವರು, ತಮ್ಮ ಪೂರ್ವಜನರನ್ನು ಸ್ಮರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.