ಬೆಂಗಳೂರು: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತಿ ಸಮಾವೇಶವು ಡಿ.10ರಂದು ಬೆಳಿಗ್ಗೆ 11ಕ್ಕೆ ಅರಮನೆ ಮೈದಾನದಲ್ಲಿ ನಡೆಯಲಿದೆ.
‘ನಮ್ಮ ಕುಲಕಸುಬನ್ನು ಕಿತ್ತುಕೊಂಡಿರುವ ಸರ್ಕಾರವು ಅದಕ್ಕೆ ಪರ್ಯಾಯ ಪರಿಹಾರವನ್ನು ನೀಡಿಲ್ಲ. ನಿಗಮವನ್ನೂ ಮಾಡಿಲ್ಲ. ನಮ್ಮ ಸಮಾಜದ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಈ ಸಮಾವೇಶ ಹಮ್ಮಿಕೊಂಡಿದ್ದೇವೆ’ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ₹500 ಕೋಟಿ ಅನುದಾನವನ್ನು ನಿಗಮಕ್ಕೆ ಒದಗಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಲಯಗಳಿಗೆ ಕಟ್ಟಡಗಳಾಗಬೇಕು. ಅದಕ್ಕೆ ಅನುದಾನ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಆರ್ಯ ಈಡಿಗರ ಸಂಘವನ್ನು ಗುರುಸ್ವಾಮಿ, ವೆಂಕಟಸ್ವಾಮಿ ಸ್ಥಾಪನೆ ಮಾಡಿ 78 ವರ್ಷಗಳಾಗಿವೆ. 75ನೇ ವರ್ಷಕ್ಕೆ ಅಮೃತ ಮಹೋತ್ಸವ ಮಾಡಬೇಕಿತ್ತು. ಆಗ ಕೋವಿಡ್ ಇದ್ದಿದ್ದರಿಂದ ಅಮೃತ ಮಹೋತ್ಸವ ಆಚರಿಸಲಾಗಿಲ್ಲ. ಕಳೆದ ವರ್ಷ ಸಂಘದ ಚುನಾವಣೆಯ ಕಾರಣಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಲಿಲ್ಲ ಎಂದು ವಿವರ ನೀಡಿದರು.
ಈಡಿಗ, ಬಿಲ್ಲವ, ಪೂಜಾರಿ, ದೀವರು, ಭಂಡಾರಿ, ಬೆಲ್ಚಡ, ಹಾಲಕ್ಷತ್ರೀಯ, ದೇಶ ಭಂಡಾರಿ, ದೇವರ, ದೇವರ ಮಕ್ಕಳು, ದೀವರ ಮಕ್ಕಳು, ಎಳಿಗ, ಎಳವ, ಗಾಮಲ್ಲ, ಗೌಂಡ್ಲ, ಹಳೇಪೈಕರು, ಹಳೇಪೈಕ್, ಇಲ್ಲಾವನ್, ಕಲಾಲ್, ಮಲೆಯಾಳಿ ಬಿಲ್ಲವ, ನಾಡಾರ್, ನಾಮಧಾರಿ, ತಿಯಾನ್ ತಿಯ್ಯ, ಈಳಿಗ, ಗೊಂಡ್ಲತಿಯನ್ ಹೀಗೆ 26 ಪಂಗಡಗಳಿವೆ. ಈ ಸಮುದಾಯಗಳಲ್ಲಿ ಜಾಗೃತಿಗಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾವೇಶದಲ್ಲಿ ಸೋಲೂರು ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ, ಧರ್ಮಸ್ಥಳ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ನಿಟ್ಟೂರು ರೇಣುಕಾನಂದ ಸ್ವಾಮೀಜಿ, ಕಾರ್ತೀಕೇಯ ಪೀಠದ ಯೋಗೇಂದ್ರ ಅವಧೂತ, ನಿಪ್ಪಾಣಿ ಅರುಣಾನಂದ ಸ್ವಾಮೀಜಿ, ಶಿವಗಿರಿ ಸತ್ಯಾನಂದತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹಾಗೂ ಸಮುದಾಯ ಪ್ರತಿನಿಧಿಸುವ ಎಲ್ಲ ಸಚಿವರು, ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ವಿವರ ನೀಡಿದರು.
ಈಡಿಗರ ಸಂಘದ ಉಪಾಧ್ಯಕ್ಷರಾದ ಟಿ. ಶಿವಕುಮಾರ್, ಎಸ್.ಎಚ್. ಪದ್ಮ ರವೀಂದ್ರ, ಪ್ರಧಾನ ಕಾರ್ಯದರ್ಶಿ ಎಚ್.ಟಿ. ಮೋಹನ್‌ದಾಸ್, ಜಂಟಿ ಕಾರ್ಯದರ್ಶಿಗಳಾದ ಜಿ.ಒ. ಕೃಷ್ಣ, ಆರ್.ಪಿ. ಪ್ರಕಾಶ್, ಮುಖಂಡರಾದ ಎಸ್.ಜೆ. ಕಾಳೇಗೌಡ, ಕೇಶವ ಪೂಜಾರಿ, ವಾಸನ್, ಸಂಪತ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.